ಬನಸ್ಕಂತ (ಗುಜರಾತ್): ಸಾಲದಾತರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಶಿಕ್ಷಕನೊಬ್ಬ ದಿಕ್ಕು ತೋಚದೆ ತನ್ನ ಒಂದು ಕಿಡ್ನಿಯನ್ನು ಮಾರಾಟ ಮಾಡಿ ಸಾಲ ಪಾವತಿಸಿದ್ದಾರೆ.
ಗುಜರಾತ್ನ ಬನಸ್ಕಂತ ಜಿಲ್ಲೆಯ ಖೋಡಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜಭಾಯ್ ಪುರೋಹಿತ್ ಎಂಬವರು ಕೆಲವರಿಂದ ಲಕ್ಷಾನುಗಟ್ಟಲೇ ಸಾಲ ಪಡೆದಿದ್ದರು. ಒಂದು ವರ್ಷದಲ್ಲಿ ಅಸಲಿಗಿಂತ ಬಡ್ಡಿಯೇ ದುಪ್ಪಟ್ಟಾಗಿತ್ತು. ಹಣ ಹಿಂದಿರುಗಿಸಲಾಗದೆ ರಾಜಭಾಯ್ ಪರದಾಡುತ್ತಿದ್ದು, ಸಾಲದಾತರ ಕಿರುಕುಳ ಕೂಡ ಹೆಚ್ಚಾಗತೊಡಗಿತು.
ಇದರಿಂದ ತನ್ನ ಮೂತ್ರಪಿಂಡವೊಂದನ್ನು ಮಾರಾಟ ಮಾಡಲು ನಿರ್ಧರಿಸಿದ ಶಿಕ್ಷಕ, ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಜಾಹೀರಾತು ನೀಡಿದ್ದಾರೆ. ಶ್ರೀಲಂಕಾದ ವೈದ್ಯರೊಬ್ಬರು ಕಿಡ್ನಿ ಖರೀದಿಸಲು ಮುಂದಾಗಿದ್ದು, ಅಲ್ಲಿಗೆ ಹೋಗಿ ರಾಜಭಾಯ್ 15 ಲಕ್ಷ ರೂ.ಗೆ ಕಿಡ್ನಿ ಮಾರಾಟ ಮಾಡಿ ಬಂದಿದ್ದಾರೆ. ಬಳಿಕ ಅಸಲು-ಬಡ್ಡಿ ಎಲ್ಲವನ್ನೂ ತೀರಿಸಿದ್ದಾರೆ.
ಆದರೂ ಕೂಡ ಸಾಲದಾತರು ಹೆಚ್ಚು ಹಣಕ್ಕೆ ಬೇಡಿಕೆ ಇಡಲು ಪ್ರಾರಂಭಿಸಿದ್ದು, ತಾಳ್ಮೆ ಕಳೆದುಕೊಂಡ ಶಿಕ್ಷಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪುರೋಹಿತ್‌ಗೆ ಹಣ ನೀಡಿದ್ದ ಹರ್ಷದ್ ವಾಜೀರ್, ದೇವಾ ರಬಾರಿ, ಓಖಾ ರಬಾರಿ ಮತ್ತು ವಶ್ರಮ್ ರಬಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.