ಗುವಾಹಟಿ: ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹಿಂಸಾಚಾರದ ಪ್ರವೃತ್ತಿಯಿಂದ ವಿಚಲಿತಳಾದ ಅಸ್ಸಾಂನ ಬಾಲಕಿಯೊಬ್ಬಳು ದೇಶಾದ್ಯಂತ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ವರಕ್ಷಣೆ ತರಬೇತಿ ಕೋರ್ಸ್ ಆರಂಭಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ಪ್ರಜ್ಞೋತಿಶ್ ಸೀನಿಯರ್ ಸೆಕೆಂಡರಿ ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಮಿನಾಕ್ಷಿ ಎಂಬ ಬಾಲಕಿ ಪ್ರಧಾನಿಗೆ ಪತ್ರ ಬರೆದಿದ್ದಾಳೆ. ಅಥ್ಲೆಟಿಕ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ 15 ವರ್ಷದ ಬಾಲಕಿ, "ಸರ್ ಇಂದು ನಾನು ಯೋಚಿಸುತ್ತಿರುವ ಯಾವುದಾದರೂ ವಿಷಯದ ಬಗ್ಗೆ ಹೇಳಲು ಬಯಸುತ್ತೇನೆ, ಸ್ವಲ್ಪ ಸಮಯ ಇದ್ದರೆ ಗಮನ ಕೋಡಿ'' ಎಂದು ಮನವಿ ಮಾಡಿದ್ದಾಳೆ.

ಮಹಿಳೆಯರ ಮೇಲಿನ ಹಲ್ಲೆ ಮತ್ತು ಹಿಂಸಾಚಾರದ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ದೇಶಾದ್ಯಂತ ಶಾಲೆಯಲ್ಲಿ ಬಾಲಕಿಯರಿಗೆ ಉಚಿತ ಸ್ವರಕ್ಷಣೆ ತರಬೇತಿ ಸೇರಿಸಲು ನಾನು ನಿಮ್ಮನ್ನು ವಿನಂತಿಸುತ್ತಿದ್ದೇನೆ. ಇದರಿಂದಾಗಿ ಶಾಲಾ ಮಕ್ಕಳು, ವಿಶೇಷವಾಗಿ ಬಾಲಕಿಯರಿಗೆ ಆತ್ಮರಕ್ಷಣೆ ಬಗ್ಗೆ ಕಲಿಸಿದರೆ ಅವರಲ್ಲಿ ವಿಶ್ವಾಸ ಮೂಡುತ್ತದೆ. ಅಗತ್ಯ ಸಮಯದಲ್ಲಿ ಅವರನ್ನು ರಕ್ಷಿಸುತ್ತದೆ ಎಂದು ಮಿನಾಕ್ಷಿ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ಸರ್, ನಾನು ಮಾಲೆಗಾಂವ್ ವುಶು ತರಬೇತಿ ಕೇಂದ್ರದ ವುಶು ಅಥ್ಲೆಟಿಕ್ ಆಗಿದ್ದೇನೆ. ಕಳೆದ ಒಂದು ವರ್ಷದಿಂದ ನನ್ನ ಮಾಸ್ಟರ್ ಸಿಜು ಗೋಪಿ ಸಿಂಗ್ ಲಾಮಾ ಅವರ ಮಾರ್ಗದರ್ಶನದಲ್ಲಿ ನನ್ನ ಪ್ರದೇಶದಲ್ಲಿ ಪ್ರತಿ ಭಾನುವಾರ ಬಾಲಕಿಯರಿಗೆ ಉಚಿತ ಸ್ವರಕ್ಷಣೆ ತರಬೇತಿ ಆಯೋಜಿಸುತ್ತೇನೆ ಎಂದು ಹೇಳಿದ್ದಾಳೆ.
ಡಾ. ಮೊನೊಜಿತ್ ಸಿಂಘಾ ಅವರ ಪುತ್ರಿಯಾದ ಮಿನಾಕ್ಷಿ, ಪ್ರಧಾನಗಳು ತಮ್ಮ ಪತ್ರಕ್ಕೆ ಉತ್ತರಿಸುವಂತೆ ಪತ್ರದ ಕೊನೆಯಲ್ಲಿ ಮನವಿ ಮಾಡಿದ್ದಾಳೆ.