ಗಾಂಧಿನಗರ: ಮಾರ್ಚ್ 26ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇದೀಗ ಕಾಂಗ್ರೆಸ್ ಪಕ್ಷ ಕುದುವೆ ವ್ಯಾಪಾರಕ್ಕೆ ಹೆದರಿಕೊಂಡಿರುವ ಕಾರಣ ತನ್ನ ಶಾಸಕರನ್ನು ಛತ್ತೀಸಗಢ್ ಅಥವಾ ಮಹಾರಾಷ್ಟ್ರಕ್ಕೆ ಶಿಫ್ಟ್ ಮಾಡುವ ಯೋಚನೆ ನಡೆಸಿದೆ.
ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಂಗ್ರೆಸ್ ರಾಜಕೀಯ ಬಿಕ್ಕಟ್ಟು ಅನುಸರಿಸುತ್ತಿರುವ ಕಾರಣ, ಬಿಜೆಪಿ ಕುದುರೆ ವ್ಯಾಪಾರ ನಡೆಸಿ, ಕೆಲವೊಂದು ಕಾಂಗ್ರೆಸ್ ಶಾಸಕರನ್ನ ಬೆಂಗಳೂರಿನಲ್ಲಿ ಕೂಡಿ ಹಾಕಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಗುಜರಾತ್ನಲ್ಲಿ ತನ್ನ ಶಾಸಕರನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.
182 ಶಾಸಕರನ್ನೊಳಗೊಂಡಿರುವ ಗುಜರಾತ್ನಲ್ಲಿ ಬಿಜೆಪಿ 103 ಹಾಗೂ ಕಾಂಗ್ರೆಸ್ 73 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಎರಡು ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವ ಇರಾದೆ ಇಟ್ಟುಕೊಂಡಿದೆ. ರಾಜ್ಯಸಭಾ ಸದಸ್ಯರು ಆಯ್ಕೆಗೊಳ್ಳಬೇಕಾದರೆ 37 ಮತಗಳನ್ನ ಪಡೆದುಕೊಳ್ಳುವ ಅವಶ್ಯಕತೆ ಇದ್ದು, ಉಳಿದ ವೋಟ್ ಪಕ್ಷೇತರ ಅಭ್ಯರ್ಥಿ ಜಿಗ್ನೇಶ್ ಮೇವಾನಿಗೆ ಹಾಕುವ ನಿರ್ಧಾರ ಕೈಗೊಂಡಿದೆ.
ಬಿಜೆಪಿ ಮೂವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿರುವ ಕಾರಣ ಅವರು ಗೆಲುವು ಸಾಧಿಸಬೇಕಾದರೆ 111 ವೋಟ್ ಬೇಕಾಗಿದ್ದು, ಐದು ವೋಟ್ ಕಡಿಮೆ ಬೀಳಲಿವೆ. ಅವುಗಳನ್ನ ಕಾಂಗ್ರೆಸ್ನಿಂದ ಪಡೆದುಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ತನ್ನ ಶಾಸಕರ ರಕ್ಷಣೆ ಮಾಡಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಇನ್ನು ಗುಜರಾತ್ನಲ್ಲಿ ಕೆಲವೇ ದಿನಗಳಲ್ಲಿ ಬಜೆಟ್ ಅಧಿವೇಶನ ಆರಂಭಗೊಳ್ಳಲಿರುವ ಕಾರಣ ಎಲ್ಲ ಶಾಸಕರು ಹಾಜರಿ ಅವಶ್ಯವಾಗಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು ಎನ್ನಲಾಗುತ್ತಿದೆ.