ಸೂರತ್: ಕ್ಯಾನ್ಸರ್‌ನಿಂದಾಗಿ ತಮ್ಮ ತಲೆ ಕೂದಲು ಕಳೆದುಕೊಂಡವರ ನೋವನ್ನ ಗುಜರಾತ್ನ ಸೂರತ್ ಮೂಲದ 10 ವರ್ಷದ ಬಾಲಕಿ ಅರ್ಥ ಮಾಡಿಕೊಂಡಿದ್ದಾಳೆ.
ಕರುಣೆ ತೋರಿಸುವವರೇ ಹೆಚ್ಚಿರುವ ಈಗಿನ ಕಾಲದಲ್ಲಿ ದೇವನಾ ದಾವೆ ಹೆಸರಿನ ಬಾಲಕಿ ತನ್ನ ತಲೆ ಕೂದಲನ್ನ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರಿಗೆ ದಾನ ಮಾಡಿ, ಇತರರಿಗೆ ಸ್ಫೂರ್ತಿಯಾಗಿದ್ದಾಳೆ.
ದೇವನಾ ದಾವೆಗೆ ಬಾಲ್ಯದಿಂದಲೂ ತನ್ನ ಕೂದಲೆಂದರೆ ತುಂಬಾ ಇಷ್ಟ ಹಾಗೂ ಒಂದು ಬಾರಿಯೂ ಹೇರ್ ಕಟ್ ಮಾಡದೆ ಬೆಳೆಸಿದ್ದಳು. ತನ್ನ ತಲೆ ಕೂದಲು 30 ಇಂಚು ಉದ್ದ ಬೆಳೆದ ಬಳಿಕ ಆಕೆ ಕ್ಯಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡವರಿಗೆ ನೀಡಬೇಕೆಂದು ನಿರ್ಧರಿಸಿದ್ದಳು. ಅದರಂತೆ ಇದೀಗ ಕೂದಲು ದಾನ ಮಾಡಿದ್ದಾಳೆ. ಕ್ಯಾನ್ಸರ್ ರೋಗಿಗಳಿಗಾಗಿ 'ಬೋಳು ಮತ್ತು ಸುಂದರ' ಎಂಬ ಅಭಿಯಾನಕ್ಕೆ ಕೂಡ ದೇವನಾ ಕೈಜೋಡಿಸಿದ್ದಳು.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ದೇವನಾ, ತಾನು ಈಗಾಗಲೇ ಎರಡು ವೆಬ್ ಸೀರೀಸ್ಗಳಲ್ಲಿ ನಟಿಸಿದ್ದು, ಇನ್ನೊಂದು ವೆಬ್ ಸೀರೀಸ್ನಲ್ಲಿ ನಟಿಸಲು ಆಫರ್ ಕೂಡ ಇತ್ತು. ಆದರೆ ಅದಕ್ಕಿಂತ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವುದು ಮುಖ್ಯವೆಂದು ಆಫರ್ ನಿರಾಕರಿಸಿರುವುದಾಗಿ ತಿಳಿಸಿದ್ದಾಳೆ.
ನಮ್ಮ ಮಗಳ ನಿರ್ಧಾರವನ್ನು ಕಂಡು ನಮಗೆ ಆಶ್ವರ್ಯವಾಯಿತು. ಅವಳನ್ನು ತಡೆಯಲು ಪ್ರಯತ್ನಿಸಿದೆವು. ಆದರೆ ಅವಳ ದೃಢ ನಿರ್ಧಾರದ ಮುಂದೆ ನಮ್ಮ ಪ್ರಯತ್ನ ವ್ಯರ್ಥವಾಯಿತು ಎಂದು ದೇವನಾಳ ತಾಯಿ ನಿಖಿತಾ ದಾವೆ ಹೇಳಿದ್ದಾರೆ.