ನವಸಾರಿ(ಗುಜರಾತ್): ಅಪ್ರಾಪ್ತೆ ಸೇರಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಮಂತ್ರವಾದಿ ಸೇರಿದಂತೆ ಮೂವರು ಕಾಮುಕರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಜರಾತ್ನ ನವಸಾರಿಯಲ್ಲಿ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಕಳೆದ ವಾರ ಸಂತ್ರಸ್ತೆ ತಂದೆ ದೂರು ದಾಖಲು ಮಾಡಿದ್ದರು. ದೂರಿನ ಆಧಾರದ ಮೇಲೆ ಇದೀಗ ವಿಷ್ಣು ನಾಯ್ಕ್ ಹಾಗೂ ಮತ್ತಿಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸಂತ್ರಸ್ತೆ ತಂದೆ ಆರೋಪಿ ಜತೆ ಸಂಪರ್ಕದಲ್ಲಿದ್ದನು. ಕಳೆದ ಕೆಲ ತಿಂಗಳ ಹಿಂದೆ ಕುಟುಂಬದಲ್ಲಿನ ಕೆಲ ವೈಯಕ್ತಿಕ ಸಮಸ್ಯೆ ಬಗೆಹರಿಸಿದ್ದನು ಎನ್ನಲಾಗಿದೆ.
ಮನೆಯಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ದೆವ್ವ ಹಿಡಿದಿದ್ದು, ಅದನ್ನ ಬಿಡಿಸುವ ಉದ್ದೇಶದಿಂದ ತಾನು ಇದ್ದ ಸ್ಥಳಕ್ಕೆ ಕರೆದುಕೊಂಡು ಬರುವಂತೆ ಹೇಳಿದ್ದನು. ಜತೆಗೆ 50 ಸಾವಿರ ರೂ. ಹಣ ತರುವಂತೆ ಸೂಚನೆ ನೀಡಿದ್ದನು. ಅದರಂತೆ ತನ್ನಿಬ್ಬರು ಮಕ್ಕಳನ್ನ ತಾಂತ್ರಿಕನ ಬಳಿ ಕರೆದುಕೊಂಡು ಬಿಟ್ಟು ಹೋಗಿದ್ದಾನೆ. ಇದರ ಪ್ರಯೋಜನ ಪಡೆದುಕೊಂಡಿರುವ ತಾಂತ್ರಿಕ ಅವರ ಮೇಲೆ ಅತ್ಯಾಚಾರವೆಸಗಿದ್ದಾನೆ. ಇನ್ನು ಬಾಲಕಿಯರು ಗರ್ಭಿಣಿಯರಾಗಿದ್ದಾರೆಂದು ಕುಟುಂಬದವರು ದೂರಿದ್ದಾರೆ.
ಈಗಾಗಲೇ ನಂದೂರ್ನಲ್ಲಿರುವ ಮಂತ್ರವಾದಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಆತನ ಇಬ್ಬರು ಸಹಾಯಕರು ಸೇರಿದಂತೆ ಮೂವರ ಬಂಧನ ಮಾಡಲಾಗಿದೆ. ಜತೆಗೆ ಅವರ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಹಾಗೂ ಲೈಂಗಿಕ ಅಪರಾಧಗಳ ಆಧಾರದ ಮೇಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ.