ಮಹಾರಾಜ್ ಗಂಜ್ (ಉತ್ತರ ಪ್ರದೇಶ): ಲಾಕ್ಡೌನ್ನಿಂದಾಗಿ ಆ್ಯಂಬುಲನ್ಸ್ ಸಿಗದೇ ಅಜ್ಜಿಯನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡ ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್ನಲ್ಲಿ ನಡೆದಿದೆ.
ಇಲ್ಲಿನ ಸವರೇಜಿ ಗ್ರಾಮದ ನಿವಾಸಿ ವಿರಜು ಎಂಬುವರ ಅಜ್ಜಿ ಪಾಲಕಿ ದೇವಿ ಕಾಲಿಗೆ ಪೆಟ್ಟಾಗಿ ಮೂಳೆ ಮುರಿದಿತ್ತು. ಅಜ್ಜಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಆ್ಯಂಬುಲನ್ಸ್ ದೂರವಾಣಿ ಸಂಖ್ಯೆ 108 ಕ್ಕೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲೇ ಇಲ್ಲ. ಎಷ್ಟೊತ್ತಾದರೂ ಕಾಲ್ ಕನೆಕ್ಟ್ ಆಗದೇ ಅಜ್ಜಿಯ ಕಾಲು ನೋವು ಹೆಚ್ಚಾಗತೊಡಗಿತ್ತು. ದಾರಿ ಕಾಣದ ಮೊಮ್ಮಗ ವಿರಜು, ತಳ್ಳು ಗಾಡಿಯಲ್ಲಿ ಅಜ್ಜಿಯನ್ನು ಮಲಗಿಸಿ ಕರೆದುಕೊಂಡು ಹೊರಟೇ ಬಿಟ್ಟ.
ಮೊದಲೇ ಕಾಲು ನೋವು ಅದರ ಮೇಲೆ ಮಧ್ಯಾಹ್ನದ ಬಿಸಿಲು ತಾಳಲಾಗದೇ ಅಜ್ಜಿ ಒಂದೇ ಸಮ ನರಳುತ್ತಿದ್ದಳು. ಆದರೆ ಮೊಮ್ಮಗನಿಗೆ ಬೇರೆ ದಾರಿಯೇ ಇರಲಿಲ್ಲ. ಹಾಗೆಯೇ ಮಹಾರಾಜ್ ಗಂಜ್ ಆಸ್ಪತ್ರೆ ತಲುಪಿ ಅಜ್ಜಿಗೆ ಚಿಕಿತ್ಸೆ ಕೊಡಿಸಿದ್ದಾನೆ.
ಈ ಕುರಿತು 108 ಆರೋಗ್ಯ ಸಹಾಯವಾಣಿಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ನೆಟ್ವರ್ಕ್ ಸಮಸ್ಯೆ ಎಂದು ಜಾರಿಕೊಂಡರು. ಮಹಾರಾಜ್ ಗಂಜ್ನಲ್ಲಿ ಹೇಳಿಕೊಳ್ಳಲು 56 ಆ್ಯಂಬುಲನ್ಸ್ ಇವೆ. ಆದರೆ ವಿರಜು ಹಾಗೂ ಅಜ್ಜಿಯ ನೆರವಿಗೆ ಇದರಲ್ಲಿ ಒಂದೂ ಆ್ಯಂಬುಲನ್ಸ್ ಬರಲಿಲ್ಲ ಎಂಬುದು ಖೇದಕರ. ಮಹಾರಾಜ್ ಗಂಜ್ ಮುಖ್ಯ ಆರೋಗ್ಯಾಧಿಕಾರಿ ಸಹ ಪ್ರಕರಣದ ಬಗ್ಗೆ ಗಂಭೀರವಾಗಿಲ್ಲ. ನೆಟ್ ವರ್ಕ್ ಸಮಸ್ಯೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ನಾವು ಪರಿಶೀಲಿಸುತ್ತೇವೆ ಎನ್ನುತ್ತಾರೆ