ನವದೆಹಲಿ: ವಾಣಿಜ್ಯ ಹಾಗೂ ಡಿಜಿಟಲ್ ಆರ್ಥಿಕತೆಯ ಕುರಿತು ಜೂನ್ 8 ಮತ್ತು 9ರಂದು ನಡೆಯಲಿರುವ ಜಿ-20 ಶೃಂಗ ಸಭೆಯ ಭಾರತೀಯ ಪ್ರತಿನಿಧಿಗಳ ನಾಯಕತ್ವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಿಕೊಳ್ಳಲಿದ್ದಾರೆ.
ಜಪಾನ್ನ ಸುಕುಬ ನಗರದಲ್ಲಿ ಈ ಶೃಂಗ ನಡೆಯಲಿದ್ದು, ಈ ವೇಳೆ ಜಾಗತಿಕ ಆರ್ಥಿಕತೆಯ ಪ್ರಸ್ತುತ ಸ್ಥಿತಿಗತಿ, ವಿಶ್ವ ವಾಣಿಜ್ಯ ಒಪ್ಪಂದದ (ಡಬ್ಲ್ಯುಟಿಒ) ವಿವಾದ ಹಾಗೂ ಡಿಜಿಟಲ್ ಆರ್ಥಿಕತೆಯ ಕುರಿತ ವಿಷಯಗಳು ಚರ್ಚೆಗೆ ಬರಲಿವೆ. ಈ ವೇಳೆ ಗೋಯಲ್ ಅವರು, ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆಯ ಬಗ್ಗೆ ಮಾತನಾಡಲಿದ್ದಾರೆ.
ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾಣಿಜ್ಯ ಸಚಿವಾಲಯ ಜಂಟಿಯಾಗಿ ಒಂದೇ ವೇದಿಕಯಲ್ಲಿ ಪಾಲ್ಗೊಂಡು ಡಿಜಿಟಲ್ ಆರ್ಥಿಕತೆ ಕುರಿತು ಚರ್ಚಿಸಲಿವೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ.
ವಿವಿಧ ರಾಷ್ಟ್ರಗಳ 50ಕ್ಕೂ ಅಧಿಕ ವಿತ್ತ ಸಚಿವರು ಭಾಗವಹಿಸುತ್ತಿದ್ದು, ವಾಣಿಜ್ಯ ಹಾಗೂ ಡಿಜಿಟಲ್ ಆರ್ಥಿಕತೆಯನ್ನು ಜಿ-20ಯ ಆರ್ಥಿಕತೆಗಳು ತಮ್ಮ ವಹಿವಾಟು, ಹೂಡಿಕೆ ಹಾಗೂ ಬಳಕೆಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು? ತಂತ್ರಜ್ಞಾನದ ಮುಖೇನ ಜಾಗತಿಕ ಆರ್ಥಿಕತೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ವಿಧಾನಗಳ ಕುರಿತು ಸಚಿವ ಗೋಯಲ್ ಬೆಳಕು ಚೆಲಲ್ಲಿದ್ದಾರೆ.