ನವದೆಹಲಿ : ರೈತರ ಪ್ರತಿಭಟನಾ ಸ್ಥಳಗಳಲ್ಲಿ ಮೊಳೆಗಳನ್ನು ಅಳವಡಿಸಲಾಗಿತ್ತು. ದೆಹಲಿ ಗಡಿಯಲ್ಲಿ ಮಾಡುತ್ತಿರುವಂತಹ ತಯಾರಿಯನ್ನ ಬಹುಶಃ ಪಾಕಿಸ್ತಾನ ಗಡಿಯಲ್ಲಿ ಸರ್ಕಾರ ಮಾಡುತ್ತಿರಲಿಲ್ಲ ಎಂದೆನಿಸುತ್ತದೆ ಎಂದು ಬಿಎಸ್ಪಿ ಸಂಸದ ಸತೀಶ್ ಮಿಶ್ರಾ ಹೇಳಿದ್ದಾರೆ.
ಗಾಜಿಪುರ ಸೇರಿದಂತೆ ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ರಸ್ತೆಗಳ ಮೇಲೆ ಪೊಲೀಸರು ಮೊಳೆಗಳನ್ನು ಅಳವಡಿಸಿದ್ದರು. ಇಂದಿನ ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ ಸತೀಶ್ ಮಿಶ್ರಾ, ಕೇಂದ್ರ ಸರ್ಕಾರದ ಈ ನಡೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.8 ಕೋಟಿಗೆ ಏರಿಕೆ.. 1.4 ಕೋಟಿ ಮಂದಿ ಗುಣಮುಖ
ಅನ್ನದಾತರನ್ನು ರಾಷ್ಟ್ರದ ಶತ್ರು ಎಂದು ಕರೆಯಲಾಗುತ್ತಿದೆ. ಸರ್ಕಾರವು ತನ್ನ ಅಹಂಕಾರವನ್ನು ಬದಿಗೊತ್ತಿ, ಮೂರು ಕಾನೂನುಗಳನ್ನು ರದ್ದುಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಪೊಲೀಸರ ಕೈಯಿಂದ ರೈತರ ವಿರುದ್ಧ ಅನೇಕ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಮಾಡಿದೆ.
ಅಲ್ಲಿ ಮಹಿಳೆಯರೂ ಇದ್ದಾರೆಂಬ ಕನಿಷ್ಠ ಜ್ಞಾನವಿಲ್ಲದೆ ಗಡಿಭಾಗಗಳಲ್ಲಿ ರೈತರು ತಂಗಲು ಮಾಡಿಕೊಂಡಿದ್ದ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆಗಳನ್ನ ಹಾಳು ಮಾಡಿದ್ದೀರಿ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಿಎಸ್ಪಿ ಸಂಸದ ಆರೋಪಿಸಿದ್ದಾರೆ.