ನವದೆಹಲಿ: ಕೋವಿಡ್-19 ವಿರುದ್ಧ ಹೋರಾಟ ಮಾಡುತ್ತಿರುವ ದೇಶದ ಜನರಿಗೆ ಕೇಂದ್ರ ಸರ್ಕಾರ ಈ ವಾರದಲ್ಲೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಹಣಕಾಸು ಸಚಿವಾಲಯದಿಂದ ಮಾಹಿತಿಯನ್ನು ಆಧರಿಸಿ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅತಿ ಸಣ್ಣ, ಸಣ್ಣ ಮತ್ತ ಮಧ್ಯಮ ಕೈಗಾರಿಕೆಗಳು (MSME) ಹಾಗೂ ಕೂಲಿ ಕಾರ್ಮಿಕರಿಗೆ ಈ ಪ್ಯಾಕೇಜ್‌ನಲ್ಲಿ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಕ್ಯಾಪಿಟಲ್ ಮಾರ್ಕೆಟ್ ರೆಗ್ಯೂಲೇಟರ್ ಸೆಕ್ಯೂರಿಟಿ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಜೊತೆ ಸರ್ಕಾರ ಮಾತುಕತೆ ನಡೆಸಿದೆ. ಹಣಕಾಸು ಇಲಾಖೆಗೆ ಸೂಕ್ತ ಸಲಹೆಗಳನ್ನು ನೀಡುವ ಸಲುವಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಜೊತೆಗೆ ಹಿರಿಯ ಅಧಿಕಾರಿಗಳು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ ಎನ್ನಲಾಗಿದೆ.
ಈ ಮೊದಲು 20 ಬಿಲಿಯನ್ ಡಾಲರ್ಸ್ ಅಂದರೆ 1.5 ಲಕ್ಷ ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಲಾಗುತ್ತೆ ಅಂತ ಹೇಳಲಾಗಿತ್ತು. ಆದ್ರೆ ಈ ಮೊತ್ತದ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶೀಘ್ರವೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಈ ಸಂಬಂಧ ಕಾರ್ಯ ಪ್ರಗತಿಯಲ್ಲಿದೆ. ಮಾರುಕಟ್ಟೆ ಮತ್ತು ಕೈಗಾರಿಕೆಗಳಿಗೆ ಅನುಕೂಲವಾಗುವಂತ ಪ್ಯಾಕೇಜ್ ಪ್ರಕಟಿಸುವುದಾಗಿ ತಿಳಿಸಿದ್ದರು. ಕೋವಿಡ್19 ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಪರಿಣಾಮ ಎಂಎಸ್‌ಎಂಇ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.