ನವದೆಹಲಿ : ನಮ್ಮ ಚಳವಳಿಯೊಂದಿಗೆ ಯಾವುದೇ ಸಂಬಂಧವಿಲ್ಲದ ರೈತ ಮುಖಂಡರು ಮತ್ತು ಸಂಸ್ಥೆಗಳೊಂದಿಗೆ ಸರ್ಕಾರ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಇದು ನಮ್ಮ ಆಂದೋಲನವನ್ನು ಕೊನೆಗೊಳಿಸುವ ಪ್ರಯತ್ನ. ಸರ್ಕಾರ ಶತ್ರುಗಳ ರೀತಿ ಪ್ರತಿಭಟಿಸುವ ರೈತರೊಂದಿಗೆ ವ್ಯವಹರಿಸುತ್ತಿದೆ ಎಂದು ಸ್ವರಾಜ್ ಇಂಡಿಯಾ ಆಂದೋಲನದ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.
ಮುಕ್ತ ಮನಸ್ಸಿನಿಂದ ಚರ್ಚೆಗೆ ಸಿದ್ದ :
ಪ್ರತಿಭಟನಾ ನಿರತ ರೈತರು ಮತ್ತು ಸಂಘಗಳು ಸರ್ಕಾರದೊಂದಿಗೆ ಚರ್ಚೆಗೆ ಸಿದ್ಧವಾಗಿವೆ ಎಂದು ನಾವು ಕೇಂದ್ರಕ್ಕೆ ಭರವಸೆ ನೀಡಲು ಬಯಸುತ್ತೇವೆ. ಮುಕ್ತ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶದೊಂದಿಗೆ ಸರ್ಕಾರ ಜೊತೆ ಚರ್ಚೆ ನಡೆಸಲು ನಾವು ಕಾಯುತ್ತಿದ್ದೇವೆ ಎಂದು ಕೇಂದ್ರ ಸಕಾರವನ್ನು ಉದ್ದೇಶಿಸಿ ಯುನೈಟೆಡ್ ಫಾರ್ಮರ್ಸ್ ಫ್ರಂಟ್‌ನ ಹೊಸ ಪತ್ರವನ್ನು ಅವರು ಓದಿದರು.
ಸರ್ಕಾರ ಬೇಕಂತಲೇ ವಿಳಂಬ ಮಾಡುತ್ತಿದೆ :
ನಮ್ಮ ಪ್ರತಿಭಟನೆಯೊಂದಿಗೆ ಸಂಬಂಧವಿಲ್ಲದ ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿರುವುದು ನೋಡಿದರೆ, ಸಮಸ್ಯೆ ಬಗೆಹರಿಸಲು ಸರ್ಕಾರ ಬೇಕಂತಲೇ ವಿಳಂಬ ಮಾಡುತ್ತಿದೆ ಮತ್ತು ಪ್ರತಿಭಟನಾ ನಿರತ ರೈತರ ಸ್ಥೈರ್ಯವನ್ನು ಮುರಿಯಲು ಬಯಸಿದೆ ಎಂಬುವುದು ಸ್ಪಷ್ಟವಾಗಿದೆ. ಸರ್ಕಾರ ನಮ್ಮ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸುತ್ತಿದೆ, ಈ ವಿಷಯದ ಬಗ್ಗೆ ಅರಿವು ಮೂಡಿಸಲು ಮತ್ತು ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳುವಂತೆ ನಾನು ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಯುಧ್ವೀರ್ ಸಿಂಗ್ ಹೇಳಿದರು.
ಓದಿ : ಪ್ರತಿಭಟನಾ ನಿರತ ರೈತರನ್ನು ಕೃಷಿ ಸಚಿವ ತೋಮರ್ ಭೇಟಿ ಮಾಡಲಿದ್ದಾರೆ : ಅಮಿತ್ ಶಾ ಮಾಹಿತಿ
ಈ ನಡುವೆ, ವಿವಿಧ ಯೋಜನೆಗಳ ಮೂಲಕ, ನಾವು ಕೃಷಿ ಕ್ಷೇತ್ರದ ಎಲ್ಲಾ ಅಂತರವನ್ನು ತುಂಬುತ್ತೇವೆ, ಅದು ರೈತರಿಗೆ ಪ್ರಯೋಜನಕಾರಿಯಾಗಿರಲಿದೆ. ಹೊಸ ಕಾನೂನುಗಳಿಂದ ರೈತರ ಬೆಳೆಗೆ ಸರಿಯಾದ ಬೆಲೆ ಸಿಗಲಿದೆ ಎಂದು ನಾನು ಖಚಿತಪಡಿಸುತ್ತೇನೆ. ಕೋವಿಡ್ ಸಂದರ್ಭದಲ್ಲೂ ಕೃಷಿ ಮತ್ತು ಕೃಷಿ ಸಂಬಂಧಿತ ಕೆಲಸಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಹೆಚ್ಚಿನ ಸುಧಾರಣೆಗಳನ್ನು ತರುತ್ತೇವೆ :
ಕೋವಿಡ್ ಸಂದರ್ಭದಲ್ಲೂ 1 ಕೋಟಿಗೂ ಹೆಚ್ಚು ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿಗೆ ತಂದಿದ್ದೇವೆ ಮತ್ತು ಕಳೆದ 8 ತಿಂಗಳಲ್ಲಿ ರೈತರ ಖಾತೆಗಳಿಗೆ 1 ಲಕ್ಷ ಕೋಟಿ ರೂ. ಜಮಾ ಮಾಡಿದ್ದೇವೆ. ಅಲ್ಲದೇ, ಕೆಲವು ಸುಧಾರಣೆಗಳನ್ನು ಕೈಗೊಂಡಿದ್ದೇವೆ ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳನ್ನು ತರುತ್ತೇವೆ ಎಂದಿದ್ದಾರೆ.
ಚರ್ಚೆಗೆ ಸಿದ್ದ : ನರೇಂದ್ರ ಸಿಂಗ್ ತೋಮರ್
ನಮ್ಮ ಮನವಿಯನ್ನು ರೈತ ಸಂಘಗಳು ಪರಿಗಣಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಹೊಸ ಕಾನೂನುಗಳಲ್ಲಿ ಏನನ್ನು ಸೇರಿಸಲು ಮತ್ತು ತೆಗೆಯಲು ಬಯಸುತ್ತಾರೆ ಎಂದು ರೈತರು ನಮಗೆ ತಿಳಿಸಬೇಕು. ಅವರಿಗೆ ಅನುಕೂಲಕವಾಗುವ ರೀತಿ ಸಮಯ ಮತ್ತು ದಿನಾಂಕ ನಿಗದಿಪಡಿಸಿ ನಾವು ಚರ್ಚೆಗೆ ಸಿದ್ಧರಿದ್ದೇವೆ. ನಾನು ಪರಿಹಾರದ ಭರವಸೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.