ಜೈಪುರ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ನಾನ ಗೃಹದ ಪೈಪ್ನಲ್ಲಿ ಬಚ್ಚಿಟ್ಟಿದ್ದ 15 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಕ್ರಮ ಸಾಗಾಟದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಕ್ಲೀನರ್ ಅಶೋಕ್ ಕುಮಾರ್, ಮೇಲ್ವಿಚಾರಕ ಯೋಗೇಂದ್ರ ಸಿಂಗ್ ರಜಪೂತ್ ಮತ್ತು ಗಜೇಂದ್ರ ಸಿಂಗ್ ಪರ್ಮಾರ್ ಎಂಬುವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತನಾಗಿರುವ ಗಜೇಂದ್ರ, ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಫಾರೂಕುದ್ದೀನ್ ಖುರೇಷಿಯ ಸಹಚರ ಎಂದು ತಿಳಿದು ಬಂದಿದೆ.
ಗಜೇಂದ್ರ, ನವೆಂಬರ್ 4ರಂದು ಪಾರ್ಸಲ್ನೊಂದಿಗೆ ಜೈಪುರಕ್ಕೆ ಬಂದಿಳಿದಿದ್ದ. ಸದ್ಯ ಬಂಧಿತ ಮೂವರು ಆರೋಪಿಗಳನ್ನು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಕಸ್ಟಮ್ಸ್ ಅಧಿಕಾರಿಗಳು ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವು ಕಳ್ಳ ಸಾಗಾಣಿಕೆದಾರರ ಪಾತ್ರವಿರುವ ಶಂಕೆಯಿಂದೆ.
ಇದಕ್ಕೂ ಮುನ್ನ ಕಳೆದ ಭಾನುವಾರ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ಜೈಪುರಕ್ಕೆ ಬಂದಿದ್ದ ಸುಮಾರು 40.62 ಲಕ್ಷ ರೂ. ಮೌಲ್ಯದ 741 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.