ಮುಂಬೈ: ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ, ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ಇಳಿಮುಖವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಪಿತೃಪಕ್ಷದ ವೇಳೆಗೆ ಹಳದಿ ಲೋಹದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 13ರಿಂದ ಪಿತೃ ಪಕ್ಷ ಆರಂಭಗೊಳ್ಳಲಿರುವ ಕಾರಣ, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇ.4ರಷ್ಟು ಬೆಲೆ ಕಡಿಮೆಯಾಗಿದ್ದು ಇದಕ್ಕೆ ಪೂರಕವಾಗಿದೆ. ಈ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಚಿನ್ನ ಖರೀದಿಸದೇ ಇರುವುದು ಸಹ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ 38 ಸಾವಿರ ರೂ ಇದ್ದು, ಇದರಲ್ಲಿ 1000 ದಿಂದ 1500 ರೂವರೆಗೆ ಕಡಿಮೆಯಾಗಬಹುದು ಎಂದು ಲೆಕ್ಕ ಹಾಕಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ 10 ಗ್ರಾಂ ಚಿನ್ನ 39 ಸಾವಿರ ರೂ ಗಡಿ ದಾಟಿತ್ತು. ಆದ್ರೆ, ಸದ್ಯ 38 ಸಾವಿರಕ್ಕೆ ಬಂದು ನಿಂತಿದ್ದು, ಇದರಲ್ಲಿ ಮತ್ತಷ್ಟು ಕಡಿಮೆಯಾಗಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಪ್ರತಿದಿನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಮುಂದಿನ 14 ದಿನದಲ್ಲಿ ಪ್ರತಿ 10 ಗ್ರಾಂಗೆ 35 ಸಾವಿರಕ್ಕೆ ಬಂದು ನಿಲ್ಲುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.