ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಹಣಕಾಸು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ರಾಜ್ಯಗಳು ವೈರಸ್ ವಿರುದ್ಧ ಹೋರಾಡುವಲ್ಲಿ ಅತಿದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಹೀಗಾಗಿ ತುರ್ತಾಗಿ COVID-19 ರ ವಿರುದ್ಧ ಹೋರಾಡಲು ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ ಬಾಕಿ ಇರುವ 42 ಸಾವಿರ ಕೋಟಿ ಜಿಎಸ್ಟಿ ಹಣದ ಜೊತೆಗೆ ಪ್ರತೀ ರಾಜ್ಯಕ್ಕೂ ಒಂದು ಲಕ್ಷ ಕೋಟಿ ರೂ. ಹಣ ಬಿಡುಗಡೆ ಮಾಡಬೇಕೆಂದು ಸುಪ್ರಿಯಾ ಶ್ರೀನಾಟೆ ಆಗ್ರಹಿಸಿದ್ದಾರೆ.
ವಿಡಿಯೋ ಕಾನ್ಫೆರೆನ್ಸ್ ಮೂಲ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮುಂಚೂಣಿಯಲ್ಲಿದ್ದು, ವೈರಸ್ ನಿಯಂತ್ರಿಸುವಲ್ಲಿ ಸಾಕಷ್ಟು ಪರಿಣಾಮಕಾರಿ ನೀತಿಗಳನ್ನು ರೂಪಿಸುತ್ತಿವೆ ಎಂದು ತಿಳಿಸಿದ್ರು. ಈ ಮಾರಣಾಂತಿಕ ಕಾಯಿಲೆ ಕೊರೊನಾ ವಿರುದ್ಧ ಹೋರಾಡುವ ಕಾರ್ಯತಂತ್ರಗಳನ್ನು ರೂಪಿಸುವಾಗ ಕೇಂದ್ರವು ರಾಜ್ಯ ಸರ್ಕಾರಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರಿಯಾ ಶ್ರೀನಾಟೆ ಹೇಳಿದರು. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆ. ಇನ್ನೇನಿದ್ದರೂ ಕೇಂದ್ರವು ರಾಜ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಯಾಕೆಂದರೆ ರಾಜ್ಯಗಳು ಸಮರ್ಥವಾಗಿದ್ದಾಗ ಮತ್ತು ಕೇಂದ್ರ ವಿಕೇಂದ್ರೀಕೃತಗೊಂಡಾಗ ಮಾತ್ರ ನಾವು ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಈ ಯುದ್ಧವನ್ನು ಗೆಲ್ಲಬಹುದು ಎಂದು ಅವರು ಹೇಳಿದ್ರು.