ಭರತ್ಪುರ್(ರಾಜಸ್ಥಾನ): ಅತ್ಯಾಚಾರಕ್ಕೊಳಗಾಗಿದ್ದ 14 ವರ್ಷದ ಬಾಲಕಿಯೊಬ್ಬಳು ಮನನೊಂದು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕಿಯು ಶನಿವಾರ ಜಾನುವಾರುಗಳಿಗೆ ಮೇವು ತರಲೆಂದು ಜಮೀನಿಗೆ ಹೋದಾಗ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸುರೇಶ್ ಕುಮಾರ್ ಕಿಂಚಿ ತಿಳಿಸಿದ್ದಾರೆ. ಈ ವೇಳೆ ಆಕೆ ಕಿರುಚಾಡಿದ್ದು, ಅಲ್ಲೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಅಣ್ಣ ಸ್ಥಳಕ್ಕೆ ಓಡಿ ಬಂದಿದ್ದಾನೆ. ಆದರೆ, ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಇನ್ನೂ ಘಟನೆ ಹಿನ್ನೆಲೆ ಬಾಲಕಿಯ ಪೋಷಕರು ಆರೋಪಿಯ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಿದ್ದರು. ಆದರೆ ಘಟನೆಯಿಂದ ಮನನೊಂದಿದ್ದ ಬಾಲಕಿ, ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣಿಗೆ ಶರಣಾಗಿದ್ದಾಳೆ.
ಮೃತ ದೇಹದ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ದೇಹವನ್ನು ಮರಳಿಸಿರುವ ಪೊಲೀಸರು, ಆರೋಪಿ ಬೇಟೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.