ಕಾನ್ಪುರ(ಉತ್ತರ ಪ್ರದೇಶ): ಜಿಲ್ಲೆಯ ಘಟಂಪೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾಸ್ ಗ್ರಾಮದಲ್ಲಿ ಕಾಳಿ ದೇವಾಲಯದ ಬಳಿ ಏಳು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಅನುಮಾನಿಸಲಾಗಿದೆ. ಬಾಲಕಿಯನ್ನು ಅಪಹರಿಸಿದ ನಂತರ ಮಾಟ-ಮಂತ್ರಕ್ಕಾಗಿ ಬಾಲಕಿಯನ್ನು ಕೊಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕರಣ್ ಕುಮಾರ್ ತನ್ನ ಕುಟುಂಬದೊಂದಿಗೆ ಜಿಲ್ಲೆಯ ಘಟಂಪೂರ್ ಪೊಲೀಸ್ ಠಾಣೆ ಪ್ರದೇಶದ ಭದ್ರಾಸ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ನಿನ್ನೆ ಸಂಜೆ ನಾಪತ್ತೆಯಾಗಿದ್ದ ಕರಣ್ ಅವರ ಏಳು ವರ್ಷದ ಮಗಳು ಶ್ರೇಯಾಗಾಗಿ ರಾತ್ರಿಯಿಡಿ ಹುಡುಕಿದ್ದಾರೆ. ಆದರೆ ಇಂದು ಬೆಳಿಗ್ಗೆ ಹೊಲಗಳಿಗೆ ಹೋಗುವಾಗ ಗ್ರಾಮಸ್ಥರು ಕಾಳಿ ದೇವಸ್ಥಾನದ ಬಳಿ ಬಾಲಕಿಯ ರಕ್ತಸಿಕ್ತವಾದ ಮೃತದೇಹ ನೋಡಿ ಬೆಚ್ಚಿಬಿದ್ದಿದ್ದಾರೆ. ಬಾಲಕಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ದೇಹದ ಕೆಲ ಅಂಗಾಂಗಳು ಸಹ ಕಾಣೆಯಾಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಕುರಿತು ಘಟಂಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಗ್ ಸ್ಕ್ವಾಡ್ ಮತ್ತು ಫೋರೆನ್ಸಿಕ್ ತಂಡದ ಸಹಾಯದಿಂದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.