ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಗೆ ಸ್ಪಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾದಂತೆ ಕಾಣುತ್ತಿದೆ.ರಾಜ್ಯಸಭಾ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್ ಪ್ರತಿಕ್ರಿಯಿಸಿ, ಗುಲಾಂ ನಬಿ ಅಜಾದ್ ಅವರನ್ನು ಪುನಃ ಹರಿಯಾಣದ ಉಸ್ತುವಾರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿ ಗುಲಾಂ ನಬಿ ಅಜಾದ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಪಕ್ಷಕ್ಕೂ ಅವರೂ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಕಾಂಗ್ರೆಸ್ ಕಾರ್ಯ ಸಮಿತಿಯಲ್ಲಿ ಅವರನ್ನು ಸೇರಿಸಿಕೊಳ್ಳುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ಗೆ ಅಜಾದ್ ಸಾಬ್ ದೊಡ್ಡ ನಾಯಕರಾಗಿದ್ದಾರೆ. ಪಕ್ಷದ ಎಲ್ಲಾ ವಿಭಾಗಗಳಲ್ಲೂ ಹಿಡಿತ ಮತ್ತು ಗೌರವವನ್ನು ಹೊಂದಿದ್ದಾರೆ. ಹೀಗಾಗಿ ಹರಿಯಾಣದ ಉಸ್ತುವಾರಿಯಾಗಿ ಅವರಿಗೆ ಮತ್ತೆ ಜವಾಬ್ದಾರಿಯನ್ನು ನೀಡಬೇಕು ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಡುಗಡೆ ಮಾಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಿಂದ ಗುಲಾಂ ನಬಿ ಅಜಾದ್, ಮೋತಿಲಾಲ್ ವೊರಾ, ಅಂಬಿಕಾ ಸೋನಿ, ಮಲ್ಲಿಕಾರ್ಜುನ್ ಖರ್ಗೆ, ಫಲೇರಿಯೊ ಅವರನ್ನು ಕೈ ಬಿಡಲಾಗಿತ್ತು. ಪಕ್ಷದ ಅಧ್ಯಕ್ಷರ ಬದಲಾವಣೆ ಕುರಿತು ಅಧ್ಯಕ್ಷರಿಗೆ ಬರೆದಿದ್ದ 23 ಮಂದಿ ನಾಯಕರಲ್ಲಿ ಗುಲಾಂ ನಬಿ ಅಜಾದ್ ಅವರೂ ಇದ್ದರು.