ಜೈಪುರ: ರಾಜಸ್ಥಾನದಲ್ಲಿ ಕಳೆದೊಂದು ತಿಂಗಳಿಂದ ಉಂಟಾಗಿದ್ದ ರಾಜಕೀಯ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವ ಮೂಲಕ ಅಶೋಕ್ ಗೆಹ್ಲೋಟ್ ಸರ್ಕಾರ ನಿಟ್ಟುಸಿರು ಬಿಟ್ಟಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ರಾಜಕೀಯ ಹೈಡ್ರಾಮದ ಸೂತ್ರದಾರಿ ಸಚಿನ್ ಪೈಲಟ್, ರಾಜಸ್ಥಾನ ಅಸೆಂಬ್ಲಿಯಲ್ಲಿ ಇಂದು ಸರ್ಕಾರ ಬಹುಮತ ಪಡೆದಿದೆ. ವಿರೋಧ ಪಕ್ಷದ ವಿವಿಧ ಪ್ರಯತ್ನಗಳ ಹೊರತಾಗಿಯೂ ಫಲಿತಾಂಶ ಸರ್ಕಾರದ ಪರವಾಗಿದೆ. ಇದರಿಂದಾಗಿ ಎಲ್ಲ ಗೊಂದಲಗಳಿಗೆ ಪೂರ್ಣ ವಿರಾಮ ದೊರೆತಿದೆ. ಭುಗಿಲೆದ್ದ ಎಲ್ಲಾ ಸಮಸ್ಯೆಗಳಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಸಮಯೋಚಿತವಾಗಿ ಜಾರಿಗೆ ತರುವ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.
ಈ ಮೊದಲು ನಾನು ಸರ್ಕಾರದ ಭಾಗವಾಗಿದ್ದೆ, ಆದರೆ ಈಗ ಅಲ್ಲ. ಒಬ್ಬರು ಎಲ್ಲಿ ಕುಳಿತುಕೊಳ್ಳುತ್ತಾರೆ ಎಂಬುದು ಮುಖ್ಯವಲ್ಲ, ಆದರೆ ಜನರ ಹೃದಯ ಮತ್ತು ಮನಸ್ಸಿನಲ್ಲಿ ಅವರಿಗೆ ಸ್ಥಾನವಿದೆಯಾ ಎಂಬುದು ಮುಖ್ಯ. ಮುಂದಿನದನ್ನು ಸ್ಪೀಕರ್ ಮತ್ತು ಪಕ್ಷ ನಿರ್ಧರಿಸುತ್ತದೆ ಮತ್ತು ನಾನು ಇದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಪೈಲಟ್ ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸಂಧಾನದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಕೋಪಗೊಂಡು ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಮತ್ತೆ ಪಕ್ಷಕ್ಕೆ ಮರಳಿದ್ದರು. ಆದರೂ ವಿಶ್ವಾಸಮತ ಯಾಚಿಸಲು ಗೆಹ್ಲೋಟ್ ತೀರ್ಮಾನಿಸಿದ್ದರು. ಇದೀಗ ಬಹುಮತ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಳೆದೊಂದು ತಿಂಗಳಿಂದ ರೆಸಾರ್ಟ್ನಲ್ಲಿ ಪಂಜರದೊಳಗಿನ ಗಿಳಿಯಂತೆ ಬಂಧಿಯಾಗಿದ್ದ ಕೈ ಶಾಸಕರಿಗೆ ಬಿಡುಗಡೆ ಭಾಗ್ಯ ಸಿಗಲಿದೆ.