ಹೈದರಾಬಾದ್ : ಕಳೆದ 15 ವರ್ಷಗಳ ಹಿಂದೆ ತೆಲಂಗಾಣದಿಂದ ನಾಪತ್ತೆಯಾಗಿ, ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದ ಯುವತಿಯೊಬ್ಬಳು ಕೊನೆಗೂ ತನ್ನ ಪೋಷಕರನ್ನು ಸೇರಿದ್ದಾಳೆ.
ಯಾರೂ ಈ ಗೀತಾ..?
ಮಹಾರಾಷ್ಟ್ರದ ಗಡಿ ಭಾಗ ತೆಲಂಗಾಣದ ಬಸಾರಾ ನಗರದ ಏಕಯ್ಯ ಮತ್ತು ಶಾಂತಾ ದಂಪತಿಗೆ 2000 ಇಸವಿಯಲ್ಲಿ ಮಗಳು ಜನಿಸಿದ್ದಳು. ಅವಳಿಗೆ ಬಾಲ್ಯದಲ್ಲಿ ಸೌಜನ್ಯ ಎಂದು ಹೆಸರಿಡಲಾಗಿತ್ತು. ಹುಡುಗಿ ಬಾಲ್ಯದಿಂದಲೂ ಕಿವುಡಿ ಮತ್ತು ಮೂಗಿಯಾಗಿದ್ದಳು. 2005 ರಲ್ಲಿ ಏಕಯ್ಯ ಕುಟುಂಬ ಹೈದರಾಬಾದ್ಗೆ ಬಂದು ನೆಲೆಸುತ್ತದೆ. ಮಗಳು 6 ವರ್ಷದವಳಿದ್ದಾಗ ಒಂದು ದಿನ ದಂಪತಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಮರಳಿ ಮನೆಗೆ ಬಂದಾಗ ಮಗಳು ಕಾಣೆಯಾಗಿದ್ದಳು.
ದಂಪತಿ ಮಗಳನ್ನು ಎಷ್ಟೇ ಹುಡುಕಿದರೂ, ಆಕೆ ಮಾತ್ರ ಪತ್ತೆಯಾಗಿರಲಿಲ್ಲ. ಬಳಿಕ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೊತ್ತಿಗಾಗಲೇ, ಗೀತಾ ( ಸೌಜನ್ಯ) ಮನೆಯ ಸಮೀಪದಿಂದ ಹಾದು ಹೋಗುತ್ತಿದ್ದ ಸಂಜೋತ ಎಕ್ಸ್ ಪ್ರೆಸ್ ರೈಲು ಹತ್ತಿ ಪಂಜಾಬ್ನ ಅಮೃತಸರ್ ಮೂಲಕ ದೂರದ ಪಾಕಿಸ್ತಾನ ತಲುಪಿದ್ದಳು. ಹೀಗೆ ಪಾಕ್ ನೆಲ ತಲುಪಿದ ಗೀತಾ, ಕೊನೆಗೆ ಕರಾಚಿಯ ಎದಿ ಫೌಂಡೇಶನ್ ಎಂಬ ಸ್ವಯಂ ಸೇವ ಸಂಘ ಸೇರುತ್ತಾಳೆ. ಅಲ್ಲಿ ಆಕೆಯ ಹೆಸರನ್ನು ಫಾತಿಮ ಎಂದು ಬದಲಾಯಿಸಲಾಗುತ್ತದೆ. ಆದರೆ, ಆಕೆಗೆ ನಮಾಜ್ ಮಾಡಲು ಬರದ ಕಾರಣ ಕೆಲವೇ ದಿನಗಳಲ್ಲಿ ಆಕೆಯ ಹೆಸರನ್ನು ಗೀತಾ ಎಂದು ಬದಲಾಯಿಸಲಾಗುತ್ತದೆ. ಈ ಮೂಲಕ ಬಾಲ್ಯದಲ್ಲಿ ಸೌಜನ್ಯ ಆಗಿದ್ದ ಹುಡುಗಿ ಗೀತಾ ಆಗಿ ಬದಲಾಗ್ತಾಳೆ.
ಗೀತಾ ಭಾರತಕ್ಕೆ ಮರಳಿದ್ದು ಹೇಗೆ..?
2015 ರಲ್ಲಿ ಸ್ವಯಂ ಸೇವಾ ಸಂಘದ ಕೋರಿಕೆ ಮೇರೆ ಆಗಿನ ವಿದೇಶಾಂಗ ಸಚಿವೆ ದಿವಂಗತ ಸುಶ್ಮಾ ಸ್ವರಾಜ್ ಅವರು, ಗೀತಾಳನ್ನು ಭಾರತಕ್ಕೆ ಕರೆ ತರುತ್ತಾರೆ. ಬಳಿಕ ಆಕೆಗೆ ಮಧ್ಯ ಪ್ರದೇಶದ ಸ್ವಯಂ ಸೇವ ಸಂಘದಲ್ಲಿ ಆಶ್ರಯವನ್ನು ನಿಡಲಾಗುತ್ತದೆ. ಬಳಿಕ ಗೀತಾ ಪೋಷಕರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನವನ್ನು ನೀಡುವುದಾಗಿ ಸುಷ್ಮಾ ಸ್ವರಾಜ್ ಘೋಷಿಸುತ್ತಾರೆ. ಆ ವೇಳೆ ಹಲವು ಮಂದಿ ಗೀತಾ ನಮ್ಮ ಮಗಳೆಂದು ಹೇಳುತ್ತಾರೆ. ಆದರೆ, ಅಗತ್ಯ ದಾಖಲೆಗಳು ಒದಗಿಸದ ಕಾರಣ ಆಕೆಯನ್ನು ಕಳಿಸಿಕೊಟ್ಟಿರಲಿಲ್ಲ.
15 ವರ್ಷಗಳ ಬಳಿಕ ಊರು ಸೇರಿದ ಗೀತಾ:
ಆದರೆ, ಸ್ವಯಂ ಸೇವಾ ಸಂಘ ಗೀತಾಳ ಪೋಷಕರನ್ನು ಹುಡುಕುವುದನ್ನು ನಿಲ್ಲಿಸಿರಲಿಲ್ಲ. ಕೊನೆಗೂ ಸಂಸ್ಥೆಯ ಪ್ರಯತ್ನ ಸಫಲವಾಗಿದೆ. ಸದ್ಯ 20 ವರ್ಷದ ಯುವತಿಯಾಗಿರುವ ಗೀತಾ, ಇತ್ತೀಚೆಗೆ ಆಕೆಯ ಹುಟ್ಟೂರು ತೆಲಂಗಾಣದ ಬಸಾರ ತಲುಪಿದ್ದಾಳೆ. ಅಲ್ಲಿ ಆಕೆ ಬಾಲ್ಯ ಕಳೆದ ಸ್ಥಳಗಳನ್ನು ಗುರುತಿಸಿದ್ದಾಳೆ. ಗೀತಾ ಆಗಮಿಸಿದ ಸುದ್ದಿ ತಿಳಿದು ಆಕೆಯ ಪೋಷಕರು, ಆಕೆಯ ಬಾಲ್ಯದ ಬಟ್ಟೆ ಬರೆಗಳನ್ನು ಹಿಡಿದು ಮುಂದೆ ಬಂದಿದ್ದು, ಗೀತಾ ತಮ್ಮ ಮಗಳೆಂದು ಗುರುತಿಸಿದ್ದಾರೆ.