ಹೈದರಾಬಾದ್: ನಾನು ಓರ್ವ ಪ್ರಾಯೋಗಿಕ ಆದರ್ಶವಾದಿ ಎಂದು ಸ್ವತಃ ಮಹಾತ್ಮ ಗಾಂಧೀಜಿ ಹಲವು ಬಾರಿ ಹೇಳಿಕೊಂಡಿದ್ದರು. ಅದು ಸತ್ಯ ಕೂಡಾ. ಸತ್ಯ, ಅಹಿಂಸೆ, ಸತ್ಯಾಗ್ರಹ ಚಳವಳಿ, ಅಸಹಕಾರ ಚಳವಳಿಯನ್ನು ಮೆಲುಕು ಹಾಕಿದರೆ ಸಾಕು ಗಾಂಧೀಜಿಯವರ ಸರಳ ಜೀವನ ನಮ್ಮ ಕಣ್ಣೆದುರು ಕಾಣಸಿಗುತ್ತದೆ. ಹೀಗಾಗಿಯೇ ಮಹಾತ್ಮನನ್ನು ಓರ್ವ ಪ್ರಾಯೋಗಿಕ ಆದರ್ಶವಾದಿ ಎಂದು ಕರೆಯೋದು.
ತಮ್ಮ ಜೀವನ ಮತ್ತು ಕೆಲ ಸಮಸ್ಯೆಗಳು ತಮಗೆ ಹೇಗೆ ಹಲವು ಪಾಠ ಹೇಳಿಕೊಟ್ಟಿದ್ದವು ಎಂಬುದನ್ನು ಹೇಳುತ್ತಾ, "ಮಾನವಕುಲಕ್ಕೆ ಹೊಸ ತತ್ವ ಅಥವಾ ಸಂದೇಶವನ್ನು ತಾನು ಕೊಟ್ಟಿಲ್ಲ. ಜಗತ್ತಿಗೆ ಹೊಸದೇನನ್ನೂ ಕಲಿಸಲು ನನಗೇನೂ ತಿಳಿದಿಲ್ಲ. ಸತ್ಯ ಹಾಗೂ ಅಹಿಂಸೆ ಬೆಟ್ಟಗಳಷ್ಟು ಹಳೆಯವು" ಎಂದು ಮಹಾತ್ಮಾ ಹೇಳಿದರು. ಇಷ್ಟೊಂದು ಸರಳತೆಯ ನಡುವೆ, ಸತ್ಯದ ದಣಿವರಿಯದ ಅನ್ವೇಷಣೆಯಲ್ಲೂ ಅವರು ತಮ್ಮ ಪ್ರಯೋಗ ಮತ್ತು ತಪ್ಪುಗಳಿಂದಲೂ ಹಲವು ವಿಚಾರಗಳನ್ನು ಕಲಿತರು.
ಸತ್ಯ ಮತ್ತು ಅಹಿಂಸೆ ಅವರ ತತ್ತ್ವಶಾಸ್ತ್ರದ ಮುಖ್ಯ ಸಿದ್ಧಾಂತಗಳು. "ನಾನು ಸತ್ಯವನ್ನು ಅನುಸರಿಸುತ್ತೇನೆ. ಹಾಗಂತಾ, ನಾನು ಅಹಿಂಸಾತ್ಮಕನಲ್ಲ. ಸತ್ಯಕ್ಕಿಂತ ದೊಡ್ಡ ಧರ್ಮ ಬೇರಿಲ್ಲ." ಅಂತೆಯೇ ಅಹಿಂಸೆ ಅತ್ಯುನ್ನತ ಕರ್ತವ್ಯ ಎಂದು ಗಾಂಧೀಜಿ ಹೇಳಿದ್ದಾರೆ.
"ಗಾಂಧಿ ತತ್ವಗಳು ಎಂಬ ಯಾವುದೇ ವಿಚಾರಗಳು ವಾಸ್ತವದಲ್ಲಿಲ್ಲ. ನನ್ನ ನಂತರ ಇಂತಹ ಯಾವುದೇ ತತ್ವಾದರ್ಶಗಳನ್ನೂ ನಾನು ಉಳಿಸಲು ಬಯಸುವುದಿಲ್ಲ. ಗಾಂಧಿ ಆದರ್ಶಗಳನ್ನು ಯಾವುದೇ ಪ್ರಚಾರದ ಮೂಲಕ ಉತ್ತೇಜಿಸುವ ಅಥವಾ ಯಾರಿಗಾದರೂ ಬೋಧಿಸುವ ಅಗತ್ಯವೂ ಇಲ್ಲ. ನಾನು ತಿಳಿಸಿರುವ ಈ ಸರಳ ಸತ್ಯಗಳನ್ನು ವಾಸ್ತವ ಜೀವನದಲ್ಲಿ ಅಳವಡಿಸುವ ಮೂಲಕ ಪ್ರಚಾರ ಮಾಡಬಹುದು. ಆದರ್ಶಗಳನ್ನು ಅನುಸರಿಸುವುದೇ ಪ್ರಚಾರ. ಇದಕ್ಕೆ ಬೇರೆ ತೆರನಾದ ಯಾವುದೇ ಪ್ರಚಾರದ ಅಗತ್ಯವಿಲ್ಲ" ಎಂದು ಗಾಂಧೀಜಿ ಪ್ರತಿಪಾದಿಸಿದರು.
ಮಹಾತ್ಮನ ಬಗ್ಗೆ ಮಾತನಾಡುತ್ತಾ, "ಗಾಂಧೀಜಿ ಅತ್ಯಂತ ಪ್ರಾಯೋಗಿಕ ವ್ಯಕ್ತಿ. ಯಾವುದೇ ಚಿಂತನೆಗಳನ್ನು ಅವರು ಪ್ರಾಯೋಗಿಕವಾಗಿ ಅನುಸರಿಸುತ್ತಾರೆ" ಎಂದು ಆಂಗ್ಲ ಬರಹಗಾರ ರೊನಾಲ್ಡ್ ಡಂಕನ್ ಅಭಿಪ್ರಾಯಪಟ್ಟಿದ್ದಾರೆ.
ವಿಜ್ಞಾನ, ಧರ್ಮ ಮತ್ತು ತತ್ವಶಾಸ್ತ್ರವನ್ನು ಒಂದುಗೂಡಿಸಿತು ಗಾಂಧೀಜಿಯ ಆಧ್ಯಾತ್ಮಿಕತೆ...
ಸತ್ಯವಿರಲಿ, ಅಹಿಂಸೆಯಿರಲಿ. ಸತ್ಯಾಗ್ರಹ-ಸರ್ವೋದಯವಿರಲಿ. ಪ್ರತಿ ಆದರ್ಶಗಳನ್ನೂ ಗಾಂಧೀಜಿಯವರು ತಮ್ಮ ಮನದ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅನುಸರಿಸುತ್ತಿದ್ದರು. ಧರ್ಮದಷ್ಟೇ ಪ್ರಾಮುಖ್ಯತೆ ವಿಜ್ಞಾನಕ್ಕೂ ನೀಡುತ್ತಿದ್ದರು. ಹಾಗಂತಾ, ಧರ್ಮ ಹಾಗೂ ವಿಜ್ಞಾನ ಯಾವತ್ತೂ ಸಂಘರ್ಷಕ್ಕೊಳಪಟ್ಟಿಲ್ಲ. ಬದಲಾಗಿ ಅವರ ಆಧ್ಯಾತ್ಮಿಕತೆಯು ವಿಜ್ಞಾನ, ಧರ್ಮ ಮತ್ತು ತತ್ವಶಾಸ್ತ್ರವನ್ನು ಒಂದುಗೂಡಿಸಿತು. ಗಾಂಧಿ ಹೇಳಿದ ಸತ್ಯಾಗ್ರಹವು ಮಾನವ ಚೈತನ್ಯವನ್ನು ಹೆಚ್ಚಿಸಿದರೆ, ಸರ್ವೋದಯವು ಎಲ್ಲಾ ಜನರನ್ನು ಬಡವ-ಬಲ್ಲಿದ, ಉದ್ಯೋಗದಾತ ಮತ್ತು ಉದ್ಯೋಗಿ ಎಂಬ ಬೇಧ-ಭಾವವಿಲ್ಲದೆ ಒಂದು ಮಾಡಿತು.
ಗಾಂಧೀಜಿ ಹೇಳುವಂತೆ ಮನಸ್ಸು ಒಂದು ಚಂಚಲ ಹಕ್ಕಿ. ಸಿಕ್ಕಷ್ಟು ಮನಸ್ಸು ಬಯಸುತ್ತಲೇ ಇರುತ್ತದೆ. ಆದರೂ ಅತೃಪ್ತಿ. ಎಲ್ಲವನ್ನೂ ನಿಯಂತ್ರಿಸುವುದು ನಮ್ಮ ಮನಸ್ಸು. ಹೀಗಾಗಿ ಮನಸ್ಸು ಶಾಂತವಾಗಿದ್ದಾಗ ಮಾತ್ರ ಸರಳ ಮತ್ತು ಅರ್ಥಪೂರ್ಣ ಜೀವನ ಸಾಧ್ಯ.
ರಾಜಕೀಯ ಮತ್ತು ಅರ್ಥಶಾಸ್ತ್ರ ಎಷ್ಟು ಮುಖ್ಯ...
ಮಾನವ ಪ್ರಗತಿಗೆ ರಾಜಕೀಯ ಹಾಗೂ ಅರ್ಥಶಾಸ್ತ್ರ ಎರಡೂ ಬಹಳ ಮುಖ್ಯವೆಂದು ಗಾಂಧೀಜಿ ತಿಳಿಸಿದ್ದರು. ಇದರಲ್ಲಿ ರಾಜಕೀಯವು ಎಂದೆಂದಿಗೂ ನಿಷೇಧವಾಗಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರದ ರಾಜಕೀಯವನ್ನು ಬಿಟ್ಟುಬಿಟ್ಟು, ಸೇವೆಯ ರಾಜಕಾರಣ ಮಾಡಿ ಎಂದು ಬಾಪೂಜಿ ಕರೆ ನೀಡಿದರು. ಧರ್ಮ ಅಥವಾ ನೀತಿಯಿಲ್ಲದ ರಾಜಕೀಯವೇ ಕೊಳಕು. ಅದೇ ರೀತಿ ನಿಜವಾದ ಅರ್ಥಶಾಸ್ತ್ರವು ಸಾಮಾಜಿಕ ನ್ಯಾಯಕ್ಕಾಗಿ ನಿಂತಿದೆ. ಇದು ದುರ್ಬಲರನ್ನು ಒಳಗೊಂಡಂತೆ ಎಲ್ಲರ ಒಳಿತನ್ನೂ ಸಮಾನವಾಗಿ ಉತ್ತೇಜಿಸುತ್ತದೆ ಹಾಗೂ ಯೋಗ್ಯ ಜೀವನಕ್ಕೆ ಅನಿವಾರ್ಯವಾಗಿದೆ ಎಂದರು.
ಮಹಾತ್ಮನಲ್ಲಿ ತುಂಬಿತ್ತು ಮಂದಹಾಸದ ಹೊನಲು...
ಆಧುನಿಕ ದೃಷ್ಟಿಕೋನ ಹೊಂದಿದ್ದ ಗಾಂಧೀಜಿ, ಕೇವಲ ಸೊಂಟಕ್ಕೆ ಒಂದು ಬಟ್ಟೆ ಸುತ್ತಿಕೊಂಡು ಸರಳವಾಗಿದ್ದರು ಮತ್ತು ಹೋದ ಕಡೆಯೆಲ್ಲಾ ತಮ್ಮ ಆಪ್ತ ಹಾಗೂ ಅನಿವಾರ್ಯವಾಗಿದ್ದ ಚರಕವನ್ನು ತೆಗೆದುಕೊಂಡು ಹೋಗುತ್ತಿದ್ದರು. ನೋವು, ಸಂಕಟ, ಅವಮಾನಗಳು ಮತ್ತು ಅಪಾರ ಕೋಪಗಳನ್ನು ಸಹಿಸಿಕೊಳ್ಳುತ್ತಿದ್ದ ಅವರ ಸಹನೆಗೆ ಯಾರೂ ಸರಿಸಾಟಿಯಲ್ಲ. ಅಷ್ಟಾಗಿಯೂ ಗಾಂಧೀಜಿಯವರ ಮುಖದಲ್ಲಿನ ಕಿರು ಮಂದಹಾಸ ಮಾತ್ರ ಎಂದಿಗೂ ಕುಂದಿಲ್ಲ.
ಒಂದು ಸಾರಿ, ತಮ್ಮ ಚರಕವನ್ನು ಉಲ್ಲೇಖಿಸಿ ಬಾಪೂಜಿ ಹೀಗೆ ಹೇಳಿದ್ದರು, "ಜನರು ನನ್ನ ಚರಕವನ್ನು ನೋಡಿ ನಕ್ಕರು. ನಾನು ಸತ್ತಾಗ ಆ ಮರದ ಚರಕ ನನ್ನ ಅಂತ್ಯಕ್ರಿಯೆಗೆ ಬೆಂಕಿ ಉರಿಸಲು ಸಹಾಯ ಮಾಡುತ್ತದೆ ಎಂದು ವಿಮರ್ಶಕನೊಬ್ಬ ಟೀಕಿಸಿದ. ಆದರೂ ಚರಕದ ಮೇಲಿನ ನನ್ನ ನಂಬಿಕೆ ಮಾತ್ರ ಸ್ವಲ್ಪವೂ ಬದಲಾಗಿಲ್ಲ".
ಯಂತ್ರಗಳು ಇರಲಿ, ಯಾಂತ್ರೀಕೃತ ಬದುಕು ಬೇಡ...
ಯಂತ್ರಗಳ ಬಳಕೆಗೆ ಹಾಗೂ ಆಧುನಿಕರಣಕ್ಕೆ ಮಹಾತ್ಮಾ ಗಾಂಧೀಜಿ ವಿರೋಧ ವ್ಯಕ್ತಪಡಿಸಿಲ್ಲ. ಸಣ್ಣ ಮನೆಗಳಲ್ಲಿ ಕೂತು, ಮೈಮುರಿದು ಕೆಲಸ ಮಾಡಿ ಕುಟುಂಬದ ಹೊರೆಯನ್ನು ಹೊರುವ ಸಾಮಾನ್ಯನ ಬದುಕು ಬೆಳಗುವ ಯಂತ್ರಗಳ ಬಳಕೆಯನ್ನು ಮಹಾತ್ಮ ಸ್ವಾಗತಿಸಿದರು. ಜೊತೆಗೆ ಯಂತ್ರಗಳ ಅನ್ವೇಷಣೆಯನ್ನೂ ಅವರು ಬೆಂಬಲಿಸಿದರು. ಹೀಗಾಗಿಯೇ ಗಾಂಧೀಜಿ ವಿರೋಧಿಸಿದ್ದು ಯಾಂತ್ರೀಕೃತ ಬದುಕನ್ನೇ ಹೊರತು ಯಂತ್ರಗಳನ್ನಲ್ಲ. ಹಸಿದ ಹೊಟ್ಟೆಗಳಿಗೆ ಕೂಳಿಲ್ಲದಂತೆ, ದುಪ್ಪಟ್ಟು ಪ್ರಮಾಣದಲ್ಲಿ ಯಂತ್ರಗಳನ್ನು ಬಳಸಿ, ಸಂಪತ್ತಿನ ಕ್ರೋಢಿಕರಿಸೋ ಹುಚ್ಚು ಹವ್ಯಾಸ ಹಾಗೂ ಪ್ರವೃತ್ತಿಯನ್ನು ಗಾಂಧೀಜಿ ಕಟುವಾಗಿ ವಿರೋಧಿಸಿದರು. ಅಂತೆಯೇ ಅವರು ಬೋಧಿಸಿದ್ದನ್ನು ಮೊದಲು ಅವರೇ ಅನುಸರಿಸಿದರು. ಅನುಸರಿಸಿದ ನಂತರವೇ ಬೋಧಿಸಿದರು.
ಈ ಸಂತನ 150 ನೇ ಜನ್ಮ ದಿನಾಚರಣೆಯ ಸಂದರ್ಭವು ಅವರ ಕೆಲಸ ಮತ್ತು ಆದರ್ಶ ಎಷ್ಟು ಪ್ರಸ್ತುತ ಎಂಬುದನ್ನು ಪ್ರತಿಬಿಂಬಿಸುವ ಸಂದರ್ಭವಾಗಿದೆ. ಹಲವು ಅಪ್ರತಿಮ ನಿಧಿಯನ್ನು ನಮಗೆ ಕೊಟ್ಟಿದ್ದಕ್ಕಾಗಿ ಮಹಾತ್ಮನಿಗೆ ಕೃತಜ್ಞತೆಯನ್ನು ಅರ್ಪಿಸಲೇಬೇಕು. ಅವರ ಆದರ್ಶ ಬದುಕಿಗೆ ಅರ್ಹರಾಗಿ ಬೆಳೆಯೋಣ.