ಹೈದರಾಬಾದ್: 26 ವರ್ಷದ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾರಿ ಚಾಲಕನ ಜೊತೆ ಕ್ಲೀನರ್ಗಳು ಈ ಕೃತ್ಯದಲ್ಲಿ ಭಾಗಿಯಾಗಿಯುವುದು ಧೃಡಪಟ್ಟಿದೆ. ನಾಲ್ವರಲ್ಲಿ ಮೊಹಮ್ಮದ್ ಪಾಷಾ ಮತ್ತು ಮಹಬೂಬ್ ಎಂದು ಗುರುತಿಸಲಾಗಿದೆ. ಟೋಲ್ಪ್ಲಾಜಾದ ಹಿಂದಿನ ಖಾಲಿ ಜಾಗದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದ ಶಾದ್ನಗರದ ಮನೆಯಿಂದ ಕೆಲಸ ಮಾಡುತ್ತಿದ್ದ ಪಶುವೈದ್ಯೆ, ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಅವರ ದ್ವಿಚಕ್ರ ವಾಹನ ಪಂಕ್ಚರ್ ಆಗಿತ್ತು. ಈ ವೇಳೆ ತಕ್ಷಣವೇ ತನ್ನ ಸಹೋದರಿ ಜತೆ ರಾತ್ರಿ 9.15ಕ್ಕೆ ಆ ವೈದ್ಯೆ ಮಾತನಾಡಿದ್ದಾರೆ. ಈ ವೇಳೆ ಹತ್ತಿರದ ಟೋಲ್ಗೇಟ್ ಬಳಿ ಹೋಗಿ ಕಾಯುವಂತೆ ಹೇಳಿದ್ದಾರೆ.
ಅಲ್ಲಿಗೆ ತೆರಳಿದಾಗ ಈ ನಾಲ್ವರು ಆರೋಪಿಗಳು ಆಕೆಯನ್ನ ಅಪಹರಿಸಿ ಟೋಲ್ಗೇಟ್ನ ಹಿಂದಿನ ಖಾಲಿ ಜಾಗದಲ್ಲಿ ಅತ್ಯಾಚಾರವೆಸಗಿ, ಕೊಲೆ ಮಾಡಿ ಮೃತದೇಹ ಸುಟ್ಟುಹಾಕಿದ್ದಾರೆ. ಶಾದ್ನಗರದಿಂದ ಸುಮಾರು 30 ಕಿಲೋಮೀಟರ್ ದೂರದ ಬ್ರಿಡ್ಜ್ ಕೆಳಗೆ ಸುಟ್ಟಿರುವ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಿರಬಹುದು. ತಲೆಗೆ ಬಲವಾದ ಗಾಯವಾಗಿತ್ತು. ಗುರುವಾರ ಮುಂಜಾನೆ 3 - 4 ಗಂಟೆ ಸಮಯದಲ್ಲಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪ್ರಾಥಮಿಕ ವರದಿಯಲ್ಲಿ ವೈದ್ಯರು ಹೇಳಿದ್ದಾರೆ.