ತಿರುವನಂತಪುರಂ: ಕೇರಳ ಸರ್ಕಾರದ ಕ್ರಿಸ್‌ಮಸ್-ನ್ಯೂ ಇಯರ್ ಬಂಪರ್ ಲಾಟರಿಯಲ್ಲಿ ಮಾರಾಟವಾಗದ ಲಾಟರಿ ಟಿಕೆಟ್ 46 ವರ್ಷದ ಲಾಟರಿ ಮಾರಾಟಗಾರನನ್ನು ರಾತ್ರೋರಾತ್ರಿ ಕೋಟ್ಯಧೀಶನನ್ನಾಗಿ ಮಾಡಿದೆ.
ಕೊಲ್ಲಂನಲ್ಲಿ ಲಾಟರಿ ವ್ಯಾಪಾರ ಮಾಡುತ್ತಿದ್ದ ತಮಿಳುನಾಡಿನ ತೆಂಕಸಿ ಮೂಲದ ಶರಫುದ್ದೀನ್ ಎಂಬಾತ ಮಾರಾಟವಾಗದ ಲಾಟರಿ ಟಿಕೆಟ್ ಮೂಲಕ ಪ್ರಥಮ ಬಹುಮಾನವಾಗಿ 12 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾನೆ.
ಕೊಲ್ಲಂ ಜಿಲ್ಲೆಯ ಆರ್ಯಂಕವ್ ಬಳಿಯ ಎರಾವಿಧರ್ಮಪುರಂನಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಶರಫುದ್ದೀನ್ , ಕೆಲವು ವರ್ಷಗಳ ಹಿಂದೆ ಗಲ್ಫ್ನಿಂದ ಹಿಂದಿರುಗಿದ್ದು, ತನ್ನ ಆರು ಮಂದಿಯ ಕುಟುಂಬವನ್ನು ನೋಡಿಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಿದ್ದನು. ಕೋವಿಡ್ ಲಾಕ್ಡೌನ್ ವೇಳೆ ಶರಫುದ್ದೀನ್ ಕುಟುಂಬದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
ಇದನ್ನೂ ಓದಿ: ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ: ಐದು ಮಂದಿ ಮೃತ
ಲಾಟರಿಯಲ್ಲಿ 12 ಕೋಟಿ ರೂಪಾಯಿ ಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರಫುದ್ದೀನ್ ಈ ಹಣದೊಂದಿಗೆ ನಾನು ಸ್ವಂತ ಮನೆ ನಿರ್ಮಿಸಲು ಬಯಸುತ್ತೇನೆ. ಇದರ ಜೊತೆಗೆ ಸಣ್ಣ ಉದ್ಯಮ ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರೆ.
ಶರಫುದ್ದೀನ್ ಕುಟುಂಬದಲ್ಲಿ ತಾಯಿ, ಇಬ್ಬರು ಸಹೋದರರು, ಪತ್ನಿ ಮತ್ತು ಮಗ ವಾಸವಾಗಿದ್ದಾರೆ. ಮಗ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈಗ ಶರಫುದ್ದೀನ್ಗೆ ಲಾಟರಿ ಮೊತ್ತದಲ್ಲಿ ಶೇಕಡಾ 30ರಷ್ಟು ತೆರಿಗೆ ಕಡಿತವಾಗಿ 7.50 ಕೋಟಿ ರೂಪಾಯಿ ಹಣ ಬರಲಿದೆ. ಇದರ ಜೊತೆಗೆ ಬಹುಮಾನದ ಮೊತ್ತದಲ್ಲಿ ಶೇಕಡಾ 10ರಷ್ಟು ಕಮೀಷನ್ ಕೂಡಾ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.