ನವದೆಹಲಿ: ದೇಶ ಕಂಡ ಚಾಣಾಕ್ಷ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಸೇನಾ ಗೌರವದೊಂದಿಗೆ ನವದೆಹಲಿಯ ಲೋಧಿ ರಸ್ತೆಯ ಚಿತಾಗಾರದಲ್ಲಿ ನಡೆಯಿತು. ಪ್ರಣಬ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದರು.
ಇದಕ್ಕೂ ಮೊದಲು ರಾಜಾಜಿ ಮಾರ್ಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 9ರಿಂದ ಪಾರ್ಥಿವ ಶರೀರವನ್ನ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಂತಿಮ ನಮನ ಸಲ್ಲಿಸಿದರು.
ಮಾಸ್ಕ್ ಹಾಗೂ ಪಿಪಿಇ ಕಿಟ್ ಹಾಕಿಕೊಂಡೇ ಇವರ ಅಂತ್ಯಕ್ರಿಯೆ ನಡೆಸಲಾಯಿತು. 84 ವರ್ಷದ ಪ್ರಣಬ್ ಮುಖರ್ಜಿ ಅವರ ನಿಧನದ ಸೂಚಕವಾಗಿ ದೇಶಾದ್ಯಂತ ಸೆ. 6ವರೆಗೆ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
84 ವರ್ಷ ವರ್ಷದ ಪ್ರಣಬ್ ಮುಖರ್ಜಿ, ಭಾರತದ 13ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು. 25 ಜುಲೈ 2012ರಿಂದ 25 ಜುಲೈ 2017ರವರೆಗೆ ಭಾರತದ ರಾಷ್ಟ್ರಪತಿಗಳಾಗಿದ್ದರು. ಪತ್ನಿ ಹಾಗೂ ಮೂವರು ಮಕ್ಕಳನ್ನು ಪ್ರಣಬ್ ಅಗಲಿದ್ದು, ಇವರಿಗೆ 2019ರಲ್ಲಿ ಭಾರತ ರತ್ನ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.