ಹೈದರಾಬಾದ್: ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ತಮ್ಮ ಜಾಮೀನಿಗಾಗಿ ಹಣ ನೀಡಿದ್ದರು ಎನ್ನಲಾದ ಪ್ರಕರಣ ಸಂಬಂಧ ಕೋರ್ಟ್ಗೆ ಹಾಜರಾದ ನಿವೃತ್ತ ನ್ಯಾಯಾಧೀಶ ನಾಗ ಮಾರುತಿ ಶರ್ಮಾ ಅವರು, ರೆಡ್ಡಿ ತಮಗೆ 40 ಕೋಟಿ ರೂ. ಆಫರ್ ಕೊಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
2012ರಲ್ಲಿ ತಾವು ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ರೆಡ್ಡಿ ಜಾಮೀನಿಗಾಗಿ ಅಧಿಕಾರಿಯೊಬ್ಬರಿಂದ 40 ಕೋಟಿ ರೂಪಾಯಿ ಲಂಚದ ಆಫರ್ ಕೊಡಿಸಿದ್ದರು, ಎಂದು ಸೋಮವಾರ ಇಲ್ಲಿನ ಸ್ಥಳೀಯ ಕೋರ್ಟ್ಗೆ ಹಾಜರಾದ ಶರ್ಮಾ ಹೇಳಿದ್ದಾರೆ.
ಶರ್ಮಾ ಅವರು ಎಸಿಬಿ ಕೋರ್ಟ್ನಲ್ಲಿ ಇದೇ ಹೇಳಿಕೆ ನೀಡಿದ್ದರು. ಲಂಚದ ಆಮಿಷವೊಡ್ಡಿದಾಗ ನಾನು ಸುತಾರಾಂ ಒಪ್ಪಲಿಲ್ಲ ಎಂದು ಅವರು ಕೋರ್ಟ್ಗೆ ತಿಳಿಸಿದ್ದರು. ಜಾಮೀನಿಗಾಗಿ ಲಂಚ ಪ್ರಕರಣದ ವಿಚಾರಣೆಯು ಇಲ್ಲಿನ ಸ್ಥಳೀಯ ಎಸಿಬಿ ಕೋರ್ಟ್ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 12ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿದೆ.