ಕೊಲ್ಕತ್ತಾ: ಭಾರತದ ಫುಟ್ಬಾಲ್ ತಂಡದ ಮಾಜಿ ನಾಯಕ 82 ವರ್ಷದ ಚುನಿ ಗೋಸ್ವಾಮಿ ಅವರು ಗುರುವಾರ ನಿಧನರಾಗಿದ್ದಾರೆ. ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಚುನಿ ಗೋಸ್ವಾಮಿ ಅವರು ಯಶಸ್ವಿ ಭಾರತೀಯ ಫುಟ್ಬಾಲ್ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಭಾರತವು 1962 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. 1964 ರ ಏಷ್ಯನ್ ಕಪ್‌ನಲ್ಲಿ ರನ್ನರ್ಸ್ - ಅಪ್ ಸ್ಥಾನವನ್ನು ಗಳಿಸಿತ್ತು.
ಬಂಗಾಳ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅಪ್ರತಿಮ ಕ್ರೀಡಾಪಟು ಆಗಿದ್ದರು. 82 ವರ್ಷದ ಚುನಿ ಗೋಸ್ವಾಮಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ. ಅವರು ಪತ್ನಿ ಬಸಂತಿ ಮತ್ತು ಮಗ ಸುದೀಪ್ತೋ ಅವರನ್ನು ಅಗಲಿದ್ದಾರೆ.
ಚುನಿ ಗೋಸ್ವಾಮಿ ಅವರು ಹೃದಯ ಸಂಬಂಧಿ, ಸಕ್ಕರೆ ಕಾಯಿಲೆ, ಪ್ರಾಸ್ಟ್ರೇಟ್ ಮತ್ತು ನರಗಳ ತೊಂದರೆಯಿಂದ ಬಳಲುತ್ತಿದ್ದರು. ಇಂದು ಸಂಜೆ 5 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಗೋಸ್ವಾಮಿ 1956 ರಿಂದ 1964 ರವರೆಗೆ ಭಾರತಕ್ಕಾಗಿ ಫುಟ್ಬಾಲ್ ಆಟಗಾರನಾಗಿ 50 ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟಿಗರಾಗಿ, 1962 ಮತ್ತು 1973 ರ ನಡುವೆ 46 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಂಗಾಳವನ್ನು ಪ್ರತಿನಿಧಿಸಿದ್ದರು.