ಚೆನ್ನೈ: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ಮತ್ತು ಅವರ ಸಹೋದ್ಯೋಗಿಗಳನ್ನು ನಿಂದಿಸಿದ ಆರೋಪದಲ್ಲಿ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮದ್ರಾಸ್ ಹಾಗೂ ಕಲ್ಕತ್ತಾ ಹೈಕೋರ್ಟ್ಗಳಲ್ಲಿ ನ್ಯಾಯಮೂರ್ತಿಯಾಗಿದ್ದ ಅವರ ಮೇಲೆ ತನ್ನ ಸಹೋದ್ಯೋಗಿಗಳಿಗೆ ನಿಂದಿಸಿದ ಆರೋಪವಿದೆ. ತಮಿಳುನಾಡಿನ ಬಾರ್ ಕೌನ್ಸಿಲ್ ಮದ್ರಾಸ್ ಹೈಕೋರ್ಟ್ನಲ್ಲಿ ದೂರು ದಾಖಲಿಸಿತ್ತು.
ಮಂಗಳವಾರವಷ್ಟೇ ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ಡಿಜಿಪಿ ಹಾಗೂ ಚೆನ್ನೈ ಪೊಲೀಸ್ ಕಮೀಷನರ್ಗೆ ಕರ್ಣನ್ ಅವರನ್ನು ಡಿಸೆಂಬರ್ 7ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶನ ನೀಡಿತ್ತು.
ಈ ಆರೋಪದಲ್ಲಿ ತನಿಖೆ ಮುಂದುವರೆಸಿದ್ದ ಚೆನ್ನೈನ ಸಿಸಿಬಿ ಕ್ರೈಮ್ ಬ್ರಾಂಚ್ ಇಂದು ಕರ್ಣನ್ ಅವರನ್ನು ಬಂಧಿಸಿದೆ.