ಗುವಾಹಟಿ: ಅಸ್ಸೋಂನಲ್ಲಿ ಮೂರು ಭಾರಿ ಮುಖ್ಯಮಂತ್ರಿ ಆಗಿದ್ದ ತರುಣ್ ಗೊಗೊಯ್ ಅವರು (84) ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತರುಣ್ ಗೊಗೊಯ್ ಅವರನ್ನು ನವೆಂಬರ್ 21ರಂದು ಜಿಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಆರು ಗಂಟೆಗಳ ಕಾಲ ಡಯಾಲಿಸಿಸ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಚಿಕಿತ್ಸೆ ನೀಡಿದ್ದರು ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಇಂದು ಸಂಜೆ ಮೃತಪಟ್ಟಿದ್ದಾರೆ.
1934ರ ಅಕ್ಟೋಬರ್ 11ರಂದು ಜನಿಸಿದ ತರುಣ್ ಗೊಗೊಯ್ ಅವರು 2001ರಿಂದ 2016ರವರೆಗೆ ಅಸ್ಸೋಂನ ಮುಖ್ಯಮಂತ್ರಿಯಾಗಿದ್ದರು. ಅಸ್ಸೋಂನಲ್ಲಿ ಸತತ ಹದಿನೈದು ವರ್ಷಗಳ ಕಾಲ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದವರು ಎಂಬ ಹೆಗ್ಗಳಿಕೆ ಅವರದಾಗಿದೆ. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ರಂಗಜನ್ ನಿಮ್ನಾ ಬುನಿಯಾಡಿ ವಿದ್ಯಾಲಯದಲ್ಲಿ ಕಲಿತರು. 1963ರಲ್ಲಿ ಅಸ್ಸೋಂನ ಗುವಾಟಿ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪೂರ್ಣಗೊಳಿಸಿ ರಾಜಕೀಯಕ್ಕೆ ಧುಮುಕಿದರು.
ತರುಣ್ ಗೊಗೊಯ್ 2001ರಿಂದ 2016ರವರೆಗೆ ಮೂರು ಬಾರಿ ಅಸ್ಸೋಂ ಮುಖ್ಯಮಂತ್ರಿಯಾಗುವ ಮೊದಲು ಅಖಿಲ ಭಾರತ ಕಾಂಗ್ರೆಸ್ (ಎ) ಸಮಿತಿಯ (ಎಐಸಿಸಿ) ಜಂಟಿ ಕಾರ್ಯದರ್ಶಿಯಾಗಿ ಶ್ರಮಿಸಿದ್ದರು. 1985 -1990ರ ಅವಧಿಯಲ್ಲಿ ಪ್ರಧಾನಿ ರಾಜೀವ್ ಗಾಂಧಿಯಡಿ ಅಖಿಲ ಭಾರತ ಕಾಂಗ್ರೆಸ್ (ಎ) ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಈ ಬಳಿಕ 1991 - 1996ರ ನಡುವೆ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಸಂಪುಟದಲ್ಲಿ ಆಹಾರ ಇಲಾಖೆ ರಾಜ್ಯ ಸಚಿವರಾಗಿದ್ದರು (ಸ್ವತಂತ್ರ). ನಂತರ, 1986-1990ರವರೆಗೆ ತರುಣ್ ಗೊಗೊಯ್ ಅವರು ಅಸ್ಸೋಂ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಪಿಸಿಸಿ) ಅಧ್ಯಕ್ಷರಾದರು.
1996ರಲ್ಲಿ ಎರಡನೇ ಬಾರಿಗೆ ಅಸ್ಸೋಂನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮರು ಆಯ್ಕೆಯಾದರು. ತರುಣ್ ಗೊಗೊಯ್ ಅವರು ಜೋರ್ಹತ್ನ ಟೈಟಾಬಾರ್ ಅಸೆಂಬ್ಲಿ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲ ಆರು ಬಾರಿ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು.