ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು, ಕೊರೊನಾ ಸಾಂಕ್ರಾಮಿದಿಂದಾಗಿ ಅತಿ ಹೆಚ್ಚು ನಿರೀಕ್ಷೆಯಿದ್ದ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ರೂ. ವಿಶೇಷ ನಿಧಿ ಮೀಸಲಿಡಲಾಗಿದೆ.
ಸ್ವಾಸ್ಥ್ಯ ಭಾರತ ಯೋಜನೆ
'ಪ್ರಧಾನಮಂತ್ರಿ ಸ್ವಾಸ್ಥ್ಯ ಭಾರತ ಯೋಜನೆ' ಆರಂಭಿಸಲಾಗುತ್ತಿದ್ದು, ಮುಂದಿನ ಆರು ವರ್ಷಗಳ ವರೆಗೆ ಈ ಹಣವನ್ನು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ಸೇವೆಗಾಗಿ ಈ ಅನುದಾನವನ್ನು ವಿನಿಯೋಗ ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂ.
ಕೋವಿಡ್ -19 ಲಸಿಕೆಗಾಗಿ 35,000 ಕೋಟಿ ರೂ. ಹಣವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಹಣವನ್ನು ಒದಗಿಸಲು ನಾನು ಸಿದ್ಧಳಾಗಿದ್ದೇನೆ. ಭಾರತದಲ್ಲಿ ಎರಡು ದೇಶೀಯ ಕೋವಿಡ್-19 ಲಸಿಕೆಗಳು ಲಭ್ಯವಿದ್ದು, ಶೀಘ್ರದಲ್ಲೇ ಇನ್ನೂ ಎರಡು ಲಸಿಕೆಗಳ ನಿರೀಕ್ಷೆಯಲ್ಲಿದ್ದೇವೆ. ಪ್ರಸ್ತುತ ದೇಶವು ವಿಶ್ವದಲ್ಲೇ ಅತಿ ಕಡಿಮೆ ಸಾವಿನ ಪ್ರಮಾಣ ಹಾಗೂ ಸಕ್ರಿಯ ಪ್ರಕರಣಗಳನ್ನು ಹೊಂದಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕಾಗಿ 2,23,846 ಕೋಟಿ ರೂ.
2021-22ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕಾಗಿ 2,23,846 ಕೋಟಿ ರೂ. ಮೀಸಲಿಡಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಇದು ಶೇ.1.37 ರಷ್ಟು ಹೆಚ್ಚಳವಾಗಿದೆ. 'ಆತ್ಮನಿರ್ಭರ ಭಾರತ'ವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸುತ್ತಿದ್ದು, ಸ್ವಾವಲಂಬಿ ಭಾರತದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಉಳಿದ ಪ್ರಮುಖ ಅಂಶಗಳು:
- 17,000 ಗ್ರಾಮೀಣ ಮತ್ತು 11,000 ನಗರ ಆರೋಗ್ಯ ಕೇಂದ್ರಗಳ ಸ್ಥಾಪನೆ
- ಪ್ರತಿ ಜಿಲ್ಲೆಯಲ್ಲೂ ರೋಗನಿರ್ಣಯ ಕೇಂದ್ರಗಳ ಸ್ಥಾಪನೆ
- 4 ಪ್ರಾದೇಶಿಕ ವೈರಲ್ ಲ್ಯಾಬ್‌ಗಳ ಸ್ಥಾಪನೆ
- 11 ರಾಜ್ಯಗಳಲ್ಲಿ 3,382 ಸಾರ್ವಜನಿಕ ಆರೋಗ್ಯ ಲ್ಯಾಬ್‌ಗಳ ನಿರ್ಮಾಣ
- 20 ಮಹಾನಗರಗಳಲ್ಲಿ ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ
- 32 ವಿಮಾನ ನಿಲ್ದಾಣಗಳಲ್ಲಿ, 11 ಬಂದರುಗಳಲ್ಲಿ ಆರೋಗ್ಯ ಕೇಂದ್ರ
- 50 ತುರ್ತು ಆಪರೇಷನ್ ಕೇಂದ್ರ, 2 ಮೊಬೈಲ್ ಆಸ್ಪತ್ರೆ ಸ್ಥಾಪನೆ