ಗುನಾ, (ಮಧ್ಯಪ್ರದೇಶ): ಭಾರಿ ಮಳೆಗೆ ಜಿಲ್ಲೆಯ ಅನೇಕ ನದಿ-ಚರಂಡಿಗಳು ಉಕ್ಕಿ ಹರಿಯುತ್ತಿವೆ. ಗುನಾದ ಮ್ಯಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನದಿ ದಾಟುವಾಗ 5 ಯುವಕರು ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದರು. ಅದರಲ್ಲೀಗ ನಾಲ್ವರು ಬದುಕಿ ಬಂದಿದ್ದು, ಇನ್ನೂ ಒಬ್ಬ ಕಾಣೆಯಾಗಿದ್ದಾನೆ.
5 ಮಂದಿ ಯುವಕರು ಮೀನು ಹಿಡಿಯಲೆಂದು ಮ್ಯಾನಾ ಪೊಲೀಸ್ ಠಾಣೆಯ ಸಮೀಪವಿರುವ ಮಕರಾವದಾ ಡ್ಯಾಂಗೆ ತೆರಳಿದ್ದರು. ಈ ವೇಳೆ ಭೈರವಿ ನದಿಯನ್ನು ದಾಟಲು ಮುಂದಾಗಿದ್ದರು. ಆದರೆ, ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ 5 ಮಂದಿ ತೇಲಿ ಹೋಗಿದ್ದರು. ಅದರಲ್ಲಿ ನಾಲ್ವರು ಹೇಗೋ ಈಜಿ ದಡ ಸೇರಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದಾನೆ.
ಪೊಲೀಸರು ಮತ್ತು ರಕ್ಷಣಾ ತಂಡಗಳು ಡೈವರ್‌ಗಳ ಸಹಾಯದಿಂದ ವ್ಯಕ್ತಿಯನ್ನು ಹುಡುಕುತ್ತಿವೆ. ಆದರೆ, ಈವರೆಗೂ ಅವನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಭಾರಿ ಮಳೆಯಿಂದಾಗಿ ಫತೇಘಡ್, ಧರ್ನವಾಡ, ಮಕ್ಸುದಡಗ, ಗುನಾ, ಬಮೋರಿಯ ಹಾಗೂ ಹಲವು ಮಾರ್ಗಗಳು ನದಿ ನಾಲೆಗಳ ಹರಿವಿನಿಂದ ಮುಚ್ಚಿಹೋಗಿವೆ.