ಪಾಟ್ನಾ(ಬಿಹಾರ): ಕೊರೊನಾ ಕಂಟಕದ ನಡುವೆ ರಾಜ್ಯದ ಜನತೆಗೆ ಪ್ರವಾಹ ಸಂಕಷ್ಟ ಎದುರಾಗಿದೆ. ಬಿಹಾರದ ಹತ್ತು ಜಿಲ್ಲೆಯಲ್ಲಿನ ಮೂರು ಸಾವಿರಕ್ಕೂ ಹೆಚ್ಚು ಗ್ರಾಮಗಳು ಈ ಪ್ರವಾಹಕ್ಕೆ ತುತ್ತಾಗಿವೆ. ಒಟ್ಟು ಎಂಟು ಲಕ್ಷಕ್ಕೂ ಅಧಿಕ ಜನರು ತಮ್ಮ ನೆಲೆ ಕಳೆದುಕೊಂಡಿದ್ದಾರೆ.
ಬಿಹಾರದ ಹತ್ತು ಜಿಲ್ಲೆಗಳ ಪೈಕಿ ಸೀತಮಾರ್ಹಿ, ಶಿವಹಾರ್, ಸುಪಾಲ್, ಕಿಶನ್‌ಗಂಜ್, ದರ್ಭಂಗಾ, ಮುಜಾಫರ್ಪುರ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಖಗಾಡಿಯಾ ಮತ್ತು ಪೂರ್ವ ಚಂಪಾರಣ್ ಪ್ರದೇಶಗಳು ಈ ಬಾರಿಯ ಪ್ರವಾಹದಿಂದ ವಿಪರೀತವಾಗಿ ಹಾನಿಗೊಳಗಾಗಿವೆ. ಬಿಹಾರದಲ್ಲಿ ಗಂಡಕ್ ಮತ್ತು ಕೋಸಿ ಸೇರಿದಂತೆ ಅನೇಕ ನದಿಗಳ ನೀರಿನ ಮಟ್ಟ ಹೆಚ್ಚಳದಿಂದಾಗಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ಗಂಡಕ್ ನದಿ ದಡದಲ್ಲಿ ಅಪಾಯದ ಮಟ್ಟ ಮೀರಿ ನದಿಯ ನೀರು ಹರಿಯತೊಡಗಿದೆ ಎಂದು ತಿಳಿದುಬಂದಿದೆ.
ಬಿಹಾರದ 10 ಜಿಲ್ಲೆಗಳ ಎಂಟು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದು, ಹೊಲಗಳಲ್ಲಿನ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದು, ತಮ್ಮ ಜೀವನವನ್ನೇ ಕಳೆದುಕೊಂಡಂತಾಗಿದೆ.
ಈ ಬಾರಿಯ ಪ್ರವಾಹದಿಂದ ಸುಮಾರು 4,000 ದನ-ಕರುಗಳು ಅಸುನೀಗಿದ್ದು, ಸರ್ಕಾರಿ ಶಾಲೆಗಳ ಅನೇಕ ಕಟ್ಟಡಗಳು ನೆಲಕ್ಕುರುಳಿವೆ. ಈವರೆಗೆ 1500 ಕ್ಕೂ ಹೆಚ್ಚು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ನೀರು ಹೆಚ್ಚುತ್ತಿರುವ ಕಾರಣ ದರ್ಬಂಗಾ - ಸಮಸ್ತಿಪುರ ಮಾರ್ಗದಲ್ಲಿ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.
ಎಲ್ಲಾ ಹತ್ತು ಜಿಲ್ಲೆಗಳ ಡಿಎಂಗಳಿಗೆ ಪ್ರವಾಹದ ಬಗ್ಗೆ ಎಚ್ಚರಿಕೆ ವಹಿಸುವಂತೆ ನಿತೀಶ್ ಸರ್ಕಾರ ನಿರ್ದೇಶಿಸಿದೆ. ವಿಪತ್ತು ನಿರ್ವಹಣಾ ವಿಭಾಗದ ಜೊತೆಗೆ, ಜಲಸಂಪನ್ಮೂಲ ಮತ್ತು ಇತರ ಇಲಾಖೆಗಳನ್ನು ಎಚ್ಚರವಾಗಿರುವಂತೆ ಸರ್ಕಾರ ಸೂಚಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ದೋಣಿಗಳ ಮೂಲಕ ಸ್ಥಳಾಂತರಿಸಲಾಗಿದ್ದು, ಪ್ರವಾಹ ಪೀಡಿತ ಜನರಿಗೆ ಪರಿಹಾರ ಒದಗಿಸಲು 134 ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.