ಸೇಲಂ (ತಮಿಳುನಾಡು): ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಘಟನೆ ಜಿಲ್ಲೆಯ ನರಸೋಧಿಪಟ್ಟಿಯ ರಾಮಸಾಮಿ ನಗರದಲ್ಲಿ ನಡೆದಿದೆ.
ನರಸೋಧಿಪಟ್ಟಿ ನಿವಾಸಿ ಅನ್ಬಲಗನ್ ಮತ್ತು ಅವರ ಸಹೋದರ ಕಾರ್ತಿ ಎಂಬವರು ಸೇಲಂನಲ್ಲಿ ಮರಗೆಲಸ ಘಟಕ ಹೊಂದಿದ್ದು, ರಾಮಸಾಮಿ ನಗರದ ಮನೆಯಲ್ಲಿ ತಂದೆ ತಾಯಿ ಜೊತೆ ವಾಸವಿದ್ದರು. ಗುರುವಾರ ರಾತ್ರಿ ಮನೆಯೊಳಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ಮನೆಯೊಳಗಿದ್ದವರನ್ನು ರಕ್ಷಿಸಲು ಪ್ರಯತ್ನಪಟ್ಟರೂ, ಸಾಧ್ಯವಾಗಿಲ್ಲ. ದುರಾದೃಷ್ಟವಶಾತ್ ಅನ್ಬಲಗನ್ ಅವರ ಸಹೋದರ ಕಾರ್ತಿ (40), ಅವರ ಪತ್ನಿ ಮಹೇಶ್ವರಿ (35) ಪುತ್ರರಾದ ಶರ್ವೇಶ್ (12), ಮುಖೇಶ್ (10) ಮತ್ತು ಅನ್ಬಲಗನ್ ಅವರ ಪತ್ನಿ ಪುಷ್ಪ (40) ಸಜೀವ ದಹನವಾಗಿದ್ದಾರೆ.
ಅದೃಷ್ಟವಶಾತ್ ಅನ್ಬಲಗನ್ ಅವರ ಪೋಷಕರು ಮತ್ತು ಮಗಳು ಸೌಮ್ಯಾ ಮನೆಯ ಟೆರಸ್ ಮೇಲೆ ಮಲಗಿದ್ದರು. ಬೆಂಕಿ ಅಲ್ಲಿಗೆ ಆವರಿಸಿಕೊಳ್ಳುವ ಮೊದಲೇ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿದೆ. ಘಟನೆಯಲ್ಲಿ ಅನ್ಬಲಗನ್ ಅವರಿಗೆ ಗಾಯಗಳಾಗಿದ್ದು, ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಸೇಲಂ ಜಿಲ್ಲಾಧಿಕಾರಿ ರಾಮನ್ ಮತ್ತು ಸೇಲಂ ಮಹಾನಗರ ಪೊಲೀಸ್ ಆಯುಕ್ತ ಸೆಂಥಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.