ಮೌ (ಉತ್ತರ ಪ್ರದೇಶ): ದೋಣಿಯೊಂದು ಮಗುಚಿದ ಪರಿಣಾಮ ಐದು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಘಾಘ್ರಾ ನದಿಯಲ್ಲಿ ನಡೆದಿದೆ.
ಮಧುಬನ್ ಬಳಿ ಚಕ್ಕಿ ಮುಸಾದೋಹಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಒಟ್ಟು 15 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ದೋಣಿ ಮುಳುಗಿದ್ದು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಭಾರೀ ಮಳೆಯಿಂದ ಘಾಘ್ರಾ ನದಿ ತುಂಬಿ ಹರಿಯುತ್ತಿದ್ದ ಪರಿಣಾಮ ಮುಸಾದೋಹಿ ಗ್ರಾಮದ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಸಂಜೆ ತೆಲಿಯಕಲನ್ ಎಂಬ ಸ್ಥಳದಲ್ಲಿರುವ ನೆರೆ ಪರಿಹಾರ ಕೇಂದ್ರಕ್ಕೆ ಗ್ರಾಮಸ್ಥರು ಧಾವಿಸುತ್ತಿದ್ದರು.
ಈ ಸಂದರ್ಭದಲ್ಲಿ ದೋಣಿ ಮಗುಚಿ, ಎಲ್ಲರೂ ನೀರಿಗೆ ಬಿದ್ದಿದ್ದರು. 9 ಮಂದಿಯನ್ನು ನೀರಿನಿಂದ ಹೊರತೆಗೆದು ರಕ್ಷಣೆ ಮಾಡಲಾಯಿತಾದರೂ, ದುರಾದೃಷ್ಟವಶಾತ್ ಐದು ಮಂದಿ ಸಾವನ್ನಪ್ಪಿದ್ದರು. 15 ವರ್ಷದ ಓರ್ವ ಬಾಲಕಿ ಕಾಣೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಘಟನೆಯ ಬಗ್ಗೆ ತಿಳಿದಾಕ್ಷಣ ಮೌ ಜಿಲ್ಲಾ ಕಲೆಕ್ಟರ್ ಗ್ಯಾನ್ ಪ್ರಕಾಶ್ ತ್ರಿಪಾಠಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.