ಕೊಚ್ಚಿ(ಕೇರಳ) : ಅಬುಧಾಬಿಯಿಂದ ಭಾರತೀಯರನ್ನು ಕರೆತರುವ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಗುರುವಾರ ರಾತ್ರಿ ಇಲ್ಲಿಗೆ ಬಂದಿಳಿದಿದೆ. ಭಾರತವು ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ಏರ್‌ಲಿಫ್ಟ್ ಪ್ರಾರಂಭಿಸಿದೆ. ಕೋವಿಡ್ -19 ಹಿನ್ನೆಲೆ ವಿದೇಶದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಮರಳಿ ಸ್ವದೇಶಕ್ಕೆ ಕರೆತರಲು ಮುಂದಾಗಿದೆ.
177 ಪ್ರಯಾಣಿಕರು ಮತ್ತು ನಾಲ್ಕು ಶಿಶುಗಳೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್ 452 ರಾತ್ರಿ 10.09ಕ್ಕೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಯಾಲ್) ಬಂದಿಳಿದಿದೆ. ಜೊತೆಗೆ 177 ಪ್ರಯಾಣಿಕರು ಮತ್ತು ದುಬೈನ ಐದು ಶಿಶುಗಳೊಂದಿಗೆ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್ 344 ರಾತ್ರಿ 10.45ಕ್ಕೆ ಕೋಝಿಕೋಡೆ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.
ಇನ್ನೂ ವಿದೇಶದಿಂದ ಆಗಮಿಸುವ ನಾಗರಿಕರನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಕ್ವಾರಂಟೈನ್ಗೆ ಕಳುಹಿಸಲಾಗುವುದು ಎಂದು ಕೇರಳ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 'ವಂದೇ ಭಾರತ್ ಮಿಷನ್' ಹೆಸರಿನಲ್ಲಿ 12ಕ್ಕೂ ಹೆಚ್ಚು ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನ ಸ್ವದೇಶಕ್ಕೆ ಕರೆತರಲಾಗ್ತಿದೆ.