ಉತ್ತರಾಖಂಡ/ಕೇರಳ/ಮಹಾರಾಷ್ಟ್ರ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಉತ್ತರಾಖಂಡ, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಇಂದು ಮತ್ತೆ ಐದು ಪ್ರಕರಣಗಳು ವರದಿಯಾಗಿದೆ.
ಫಿನ್ಲೆಂಡ್‌ನಿಂದ ಡೆಹ್ರಾಡೂನ್ಗೆ ಹಿಂತಿರುಗಿದ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಸಂಶೋಧನಾ ತರಬೇತುದಾರನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಉತ್ತರಾಖಂಡದಲ್ಲಿ ಮೊದಲ ಕೊವಿಡ್-19 ಪ್ರಕರಣ ವರದಿಯಾದಂತಾಗಿದೆ.
ಕೇರಳದ ತಿರುವನಂತಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಮತ್ತೆ ಇಬ್ಬರು ವ್ಯಕ್ತಿಗಳ ರಕ್ತ ಮಾದರಿ ವರದಿ ಧನಾತ್ಮಕ ಎಂದು ಬಂದಿದ್ದು, ಕೇರಳದಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾದಂತಾಗಿದೆ. ಇನ್ನು ಮಹಾರಾಷ್ಟ್ರದ ಪುಣೆಯಲ್ಲಿ ಕೂಡ ಇಂದು ಮತ್ತೊಂದು ಕೊವಿಡ್-19 ಪ್ರಕರಣ ವರದಿಯಾಗಿದೆ. ಇಲ್ಲಿ ಸೋಂಕು ಪತ್ತೆಯಾದ ವ್ಯಕ್ತಿ ಜಪಾನ್‌ಗೆ ಭೇಟಿ ನೀಡಿ ಬಂದಿದ್ದ. ಈ ಮೂಲಕ ಪುಣೆಯಲ್ಲಿ 16 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಮಹಾರಾಷ್ಟ್ರದಲ್ಲಿ 32 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.