ನೆಲ್ಲೂರು (ಆಂಧ್ರ ಪ್ರದೇಶ): ಆಂಧ್ರಪ್ರದೇಶದ ನೆಲ್ಲೂರಿನ ರಾಸಾಯನಿಕ ಗೋಧಾಮಿನಲ್ಲಿ ಭಾನುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿರುವುದು ಈ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೈಡ್ರೋಜನ್ ಪೆರಾಕ್ಸೈಡ್ ಸೇರಿದಂತೆ ಅನೇಕ ರಾಸಾಯನಿಕಗಳನ್ನು ಗೊಡೌನ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಾರಣ ಈ ಘಟನೆಯು ಆತಂಕಕ್ಕೆ ಕಾರಣವಾಗಿದೆ.
ದುರ್ಘಟನೆಯ ಬಳಿಕ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ರಾಜ್ಯ ಜಲಸಂಪನ್ಮೂಲ ಸಚಿವ ಅನಿಲ್ ಕುಮಾರ್ ಯಾದವ್ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ.
ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ. ವಿಶಾಖಪಟ್ಟಣಂ ಅನಿಲ ಸೋರಿಕೆಯ ಕೆಲವೇ ದಿನಗಳ ಬಳಿಕ ಈ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.