ಜೈಪುರ(ರಾಜಸ್ಥಾನ): ರಾಜಸ್ಥಾನದಲ್ಲಿ ಮಿಡತೆಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕಾಗಿ ಜೈಪುರದ ಘಟಿ ಘನಶ್ಯಾಮ್ಪುರ ಗ್ರಾಮದಲ್ಲಿ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಇದಕ್ಕಾಗಿ ಅಗ್ನಿಶಾಮಕ ದಳವನ್ನು ಬಳಸಿಕೊಳ್ಳಲಾಗುತ್ತಿದೆ.
ಪಾಕಿಸ್ತಾನ ಮಿಡತೆಗಳ ಕೇಂದ್ರ ಸ್ಥಾನವಾಗುತ್ತಿದ್ದು, ಅದರ ಸುತ್ತಮುತ್ತಲಿನ ಭಾರತದ ರಾಜ್ಯಗಳ ಮೇಲೆಯೂ ಮಿಡತೆಗಳ ಹಾವಳಿ ಜೋರಾಗಿದೆ. ಇದರಿಂದ ರಾಜಸ್ಥಾನದಲ್ಲಿಯೂ ಕೂಡಾ ಮಿಡತೆಗಳು ವ್ಯಾಪಿಸಿಕೊಂಡಿವೆ ಎಂದು ರಾಜಸ್ಥಾನ ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಆರ್. ಕದ್ವಾ ಸ್ಪಷ್ಟಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿಯೇ ರಾಜಸ್ಥಾನದ ಅಲ್ಲಲ್ಲಿ ಮಿಡತೆಗಳ ದಾಳಿ ಸ್ವಲ್ಪ ಮಟ್ಟಿಗೆ ಆರಂಭವಾಗಿತ್ತು. ಮೇ 11ರಂದು ಗಂಗಾನಗರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಮಿಡತೆಗಳ ದಾಳಿ ನಡೆದಿತ್ತು. ಈಗಲೂ ಕೂಡಾ ರಾಜಸ್ಥಾನದ ಅಕ್ಕಪಕ್ಕದ ರಾಜ್ಯಗಳಿಗೆ ಮಿಡತೆಗಳು ಲಗ್ಗೆ ಇಟ್ಟಿವೆ.
ಸದ್ಯಕ್ಕೆ ಲೋಕಸ್ಟ್ ವಾರ್ನಿಂಗ್ ಆರ್ಗನೈಸೇಷನ್ (ಎಲ್ಡಬ್ಲ್ಯೂಒ) ಮತ್ತೊಂದು ಬಾರಿ ಮಿಡತೆಗಳು ದಾಳಿ ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಇಲಾಖೆಗೆ ಎಚ್ಚರಿಕೆ ನೀಡಿದೆ.