ಮುಜಾಫರ್ಪುರ: ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದ ರಾಮಚಂದ್ರ ಗುಹಾ, ಮಣಿರತ್ನಂ, ಅಪರ್ಣ ಸೇನ್ ಸೇರಿದಂತೆ 50 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಕೀಲ ಸುಧೀರ್ ಕುಮಾರ್ ಓಜ್ಙಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಆದೇಶ ಹೊರಡಿಸಿದ 2 ತಿಂಗಳುಗಳ ಬಳಿಕ 50 ಗಣ್ಯರ ವಿರುದ್ಧ ಸದಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸದಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವ ಗಣ್ಯರ ಬಗ್ಗೆ ನಾನು ಸಲ್ಲಿಸಿರುವ ಅರ್ಜಿಯ ಕುರಿತು ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆ.20ರಂದು ಆದೇಶ ಹೊರಡಿಸಿದ್ದರು. ಪ್ರಧಾನಿಗೆ ಬರೆದ ಪತ್ರದಲ್ಲಿ 50 ಗಣ್ಯರ ಸಹಿಗಳನ್ನು ಅರ್ಜಿಯಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಈ 50 ಸೆಲೆಬ್ರಿಟಿಗಳ ಮೇಲೆ ದೇಶದ ಘನತೆಗೆ ಧಕ್ಕೆ ತಂದಿರುವ ಹಾಗೂ ಪ್ರಧಾನಿ ಮೋದಿಯವರು ಅದ್ಭುತ ಕಾರ್ಯಕ್ಷಮತೆಯ ಹೊರತಾಗಿಯೂ ದೇಶದಲ್ಲಿ ಪ್ರತ್ಯೇಕವಾದಿ ಪ್ರವೃತ್ತಿನ್ನು ಬೆಂಬಲಿಸಿದ್ದಾರೆಂದು ಆರೋಪಿಸಲಾಗಿದೆ ಎಂದು ಓಝ್ಹಾ ತಿಳಿಸಿದ್ದಾರೆ.
ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಚಿತ್ರ ನಿರ್ಮಾಪಕ ಮಣಿರತ್ನಂ, ನಟಿ ಸೌಮಿತ್ರಾ ಚಟರ್ಜಿ, ಶ್ಯಾಮ್ ಬೆನಗಲ್, ಅನುರಾಗ್ ಕಶ್ಯಪ್ ಹಾಗೂ ಶುಭಾ ಮುದ್ಗಲ್ ಸೇರಿದಂತೆ 49 ಗಣ್ಯ ವ್ಯಕ್ತಿಗಳು ಜುಲೈ ತಿಂಗಳಿನಲ್ಲಿ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದು, ಪತ್ರದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನ ತೀವ್ರವಾಗಿ ಖಂಡಿಸಿದ್ದರು. ದೇಶದಾದ್ಯಂತ ದಲಿತರು, ಮುಸ್ಲಿಮರು ಹಾಗೂ ಅಲ್ಪ ಸಂಖ್ಯಾತರನ್ನು ಗುಂಪು ಹತ್ಯೆಯಲ್ಲಿ ಕೊಲ್ಲುವ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು. ಭಿನ್ನಾಭಿಪ್ರಾಯವಿಲ್ಲದೆ ಯಾವುದೇ ಪ್ರಜಾಪ್ರಭುತ್ವ ಇರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.