ಬರ್ವಾನಿ (ಮಧ್ಯಪ್ರದೇಶ): ಪೊಲೀಸರು ಹಾಗೂ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮೇಲೆ ದಾಳಿ ಮಾಡಿದ್ದ ಸುಮಾರು 400 ಅಪರಿಚಿತರ ಮೇಲೆ ಎಫ್ಐಆರ್ ದಾಖಲಿಸಿರುವ ಘಟನೆ ಬಿರ್ವಾನಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಬಿಜಸಾನ್ ಎಂಬ ರೆಡ್ ಝೋನ್ ಪ್ರದೇಶದಲ್ಲಿ ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶಕ್ಕೆ ಸೇರಿದ ಸುಮಾರು 7 ಸಾವಿರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ನೀಡುವಂತೆ ಆಗ್ರಹಿಸಿ ಆಗ್ರಾ - ಬಾಂಬೆ ರಸ್ತೆಯನ್ನು ಬಂದ್ ಮಾಡಿದ್ದರು. ಈ ವೇಳೆ, ಸ್ಥಳಕ್ಕೆ ಧಾವಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆದು ವಾತಾವರಣ ಹದೆಗಟ್ಟಿತ್ತು.
ಪೊಲೀಸರು ಗುಂಪು ಚದುರಿಸಲು ಪ್ರಯತ್ನ ಪಟ್ಟಿದ್ದು, ಈ ವೇಳೆ, ಪೊಲೀಸರ ಮೇಲೆ ವಲಸಿಗರು ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಓರ್ವ ಹೆಚ್ಚುವರಿ ಎಸ್ಪಿ, ಓರ್ವ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಸುಮಾರು ಎರಡು ದಿನಗಳಿಂದ ಇಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಬಿರ್ವಾನಿ ಆಡಳಿತ ಮಂಡಳಿಗೂ ಕೂಡ ಮನವಿ ಸಲ್ಲಿಸಿದ್ದರು. ಆದರೆ, ವಲಸಿಗರ ಮನವಿಗೆ ಸರ್ಕಾರ ಸ್ಪಂದನೆ ನೀಡಿರಲಿಲ್ಲ ಎನ್ನಲಾಗಿದೆ.