ನವದೆಹಲಿ: ನರೇಂದ್ರ ಮೋದಿ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಇಂದು ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದ್ದು, ಜನರಲ್ಲಿ ಭಾರೀ ನಿರೀಕ್ಷೆಗಳು ಮೂಡಿವೆ.
ಚೊಚ್ಚಲ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ಗೂ ಕೂಡ ಇದು ಸವಾಲಿನ ಕೆಲಸವಾಗಿದ್ದು, ಎಲ್ಲ ಕ್ಷೇತ್ರಕ್ಕೂ ಆದ್ಯತೆ ನೀಡುವ ಮೂಲಕ ಎಲ್ಲರಿಂದಲೂ ಶಹಬ್ಬಾಸ್ಗಿರಿ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ. ಪ್ರಮುಖವಾಗಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಇಲಾಖೆ, ನಿರುದ್ಯೋಗ ಹೊಗಲಾಡಿಸುವ ನಿಟ್ಟಿನಲ್ಲಿ ಸಣ್ಣ ಉದ್ಯಮ, ಆರೋಗ್ಯ ಕ್ಷೇತ್ರ, ಶಿಕ್ಷಣ, ರೈಲ್ವೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಬಂಡವಾಳ ಹೊಡಿಕೆ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ.
ಇದರ ಜತೆಗೆ ಮೂಲಭೂತ ಸೌಕರ್ಯಗಳ ಸುಧಾರಣೆ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‍ಎಂಇ) ವಲಯಗಳ ಸಮಸ್ಯೆಗಳ ನಿವಾರಣೆ, ವಿದೇಶಿ ನೇರ ಬಂಡವಾಳ (ಎಫ್‍ಡಿಐ), ಯುವ ಶಕ್ತಿಯ ಸದ್ಬಳಕೆ, ಮಹಿಳಾ ಸಬಲೀಕರಣ ಮೊದಲಾದ ಕ್ಷೇತ್ರಗಳು ಕೂಡ ಎನ್‍ಡಿಎ ಸರ್ಕಾರದ ಆದ್ಯತೆಯ ಕ್ಷೇತ್ರಗಳಾಗಿವೆ.
ದೇಶದ ಆರ್ಥಿಕ ಬೆಳವಣಿಗೆ, ವಿವಿಧ ಕಲ್ಯಾಣ ಯೋಜನೆ, ರೈತರ ಅಭಿವೃದ್ಧಿ, ಉದ್ಯೋಗ, ಬೆಳೆ ವಿಮೆ, ರಕ್ಷಣಾ ವಲಯ ಸೇರಿದಂತೆ ವಿವಿಧ ವಿಭಾಗಕ್ಕೆ ಹಣಕಾಸು ಹೊಂದಾಣಿಕೆ ಮಾಡುವ ಜವಾಬ್ದಾರಿ ಸಹ ಇವರ ಮೇಲಿದೆ. ಪ್ರಮುಖವಾಗಿ ಈ ಹಿಂದಿನ ಮಧ್ಯಂತರ ಬಜೆಟ್ನಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರ ಖಾತೆಗಳಿಗೆ ವಾರ್ಷಿಕ 6,000 ರೂಪಾಯಿ ಜಮೆ, ಮಧ್ಯಮ ವರ್ಗ ಹಾಗೂ ತೆರಿಗೆ ಪಾವತಿದಾರರನ್ನು ಸಂತೃಪ್ತಿಗೊಳಿಸಲು ಆದಾಯ ತೆರಿಗೆ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ ಸೇರಿದಂತೆ ಅನೇಕ ಜನಪ್ರಿಯ ಘೋಷಣೆಗಳನ್ನು ನೀಡಲಾಗಿತ್ತು. ಈ ಸಲವೂ ಅವುಗಳನ್ನ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇದೆ.
ಆರ್ಥಿಕ ಸುಧಾರಣಗೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿರುವ ಕಾರಣ ಡಿಜಿಟಲ್ ಬ್ಯಾಂಕಿಂಗ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮತ್ತಷ್ಟು ಸುಧಾರಣೆ ತರುವ ಸಾಧ್ಯತೆ ಇದೆ. ಆದಾಯ ತೆರಿಗೆ ಇಲಾಖೆಯಲ್ಲೂ ಕೆಲವೊಂದು ಮಹತ್ವದ ಬದಲಾವಣೆ ಮಾಡಬಹುದಾಗಿದೆ.