ಮುಂಬೈ: ಒಂದೇ ದಿನದಲ್ಲಿ ಸಂಭವಿಸಿದ ಪ್ರತ್ಯೇಕ ರೈಲು ಅಪಘಾತಗಳಲ್ಲಿ 15 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ವಾಣಿಜ್ಯ ನಗರಿಯಲ್ಲಿ ನಡೆದಿದೆ.
ಕೆಲವರು ಅಕ್ರಮವಾಗಿ ರೈಲ್ವೆ ಹಳಿಗಳನ್ನು ದಾಟುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದರೆ ಮತ್ತೆ ಕೆಲವರು ಪ್ಯಾಕ್ ಮಾಡಿದ್ದ ರೈಲುಗಳಿಂದ ಬಿದ್ದಿದ್ದಾರೆ. ಆದ್ದರಿಂದಲೇ ಈ ಅನಾಹುತಗಳು ಸಂಭವಿಸಿವೆ ಎಂದು ಪೊಲೀಸ್ ವಕ್ತಾರ ಎಸ್.ಆರ್. ಗಾಂಧಿ ಹೇಳಿದ್ದಾರೆ.
ಈ ವಾಣಿಜ್ಯ ನಗರಿಯಲ್ಲಿ ಮುಂಗಾರು ಮಳೆ ಸುರಿಯುವ ಸಂದರ್ಭದಲ್ಲಿ ತಮ್ಮ ಸ್ಥಳಗಳಿಗೆ ತೆರಳಲು ಪ್ರಯಾಣಿಕರು ಅಡ್ಡ ಮಾರ್ಗಗಳನ್ನು ಬಳಸುತ್ತಾರೆ. ಅಲ್ಲದೆ, ಅಡ್ಡ ಮಾರ್ಗಗಳಿಗೆ ಆದ್ಯತೆ ನೀಡುವ ಮಂದಿಯೇ ಹೆಚ್ಚು. ಇದರಿಂದ ಇಂತಹ ದುರಂತಗಳು ಸಂಭವಿಸುತ್ತವೆ ಎಂದು ಗಾಂಧಿ ತಿಳಿಸಿದ್ದಾರೆ.
ಮುಂಬೈನಲ್ಲಿರುವ 2 ಕೋಟಿ ಜನಸಂಖ್ಯೆಯಲ್ಲಿ ನಿತ್ಯ 75 ಲಕ್ಷ ಜನರು ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಅದರಲ್ಲಿ ಕಿಕ್ಕಿರಿದ ಜನಸಂದಣಿಯಿಂದ ರೈಲುಗಳಿಂದ ಬಿದ್ದು ಮತ್ತು ರೈಲು ಹಳಿಗಳನ್ನು ದಾಟುವಾಗ ದಿನಕ್ಕೆ ಕನಿಷ್ಠ 10 ಮಂದಿ ಬಲಿಯಾಗುತ್ತಿದ್ದಾರೆ.
ಭಾರತೀಯ ರೈಲ್ವೆ ಅಂಕಿ-ಅಂಶಗಳ ಪ್ರಕಾರ 2015 ರಿಂದ 2017 ರವರೆಗೆ ದೇಶಾದ್ಯಂತ ಹಳಿಗಳಲ್ಲಿ ಮತ್ತು ರೈಲುಗಳಲ್ಲಿ ಸಂಭವಿಸಿದ ವಿವಿಧ ರೀತಿಯ ಅಪಘಾತಗಳಿಂದ ಸುಮಾರು 50 ಸಾವಿರ ಜನರು ಸಾವನ್ನಪ್ಪಿದ್ದಾರಂತೆ.
ಒಟ್ಟಾರೆ ಭಾರತದಲ್ಲಿ ನಿತ್ಯ 2.4 ಕೋಟಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ಸುರಕ್ಷತೆ ಇರುವುದಿಲ್ಲ ಎಂದು ವಿಮರ್ಶಕರು ಹೇಳುತ್ತಾರೆ. ಹರಿಯಾಣದಲ್ಲಿ ಇದೇ ಮೇ ತಿಂಗಳಲ್ಲಿ ರೈಲ್ವೆ ಹಳಿಗಳ ಮೇಲೆ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ರೈಲು ಅಪಘಾತ ಸಂಭವಿಸಿ ಮೂವರು ಹದಿಹರೆಯದವರು ಮೃತಪಟ್ಟಿದ್ದರು.