ನವದೆಹಲಿ: ಕೋವಿಡ್ -19ಗಾಗಿ ವೈದ್ಯಕೀಯ ಪ್ರಯೋಗದ ಅನುಮತಿ ಪಡೆದಿರುವ ಟೀಕೋಪ್ಲಾನಿನ್ ಅಥವಾ ಮೆಟ್ರೋನಿಡಜೋಲ್ ಕೊರೊನಾ ವೈರಸ್ ರಾಮಬಾಣವಿದ್ದಂತೆ ಎನ್ನಲಾಗಿದ್ದು, ಸೋಂಕಿಗೆ ಈಗಾಗಲೇ ನೀಡುತ್ತಿರುವ ಔಷಧಗಳಿಗಿಂತ 10 ಪಟ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ತಿಳಿಸಿದೆ.
ಕೊರೊನಾ ವೈರಸ್ ನಿವಾರಣೆಗಾಗಿ ಈಗಾಗಲೇ 23 ಔಷಧಗಳಿಗೆ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅನುಮತಿ ನೀಡಿದೆ. ನಿರ್ದಿಷ್ಟ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಕೋವಿಡ್ ರೋಗಿಗಳಿಗೆ ಈ ಔಷಧಗಳನ್ನು ನೀಡಿ ಸೋಂಕಿನಿಂದ ಚೇತರಿಕೆ ಕಾಣುವಂತೆ ಮಾಡಲಾಗುತ್ತಿದೆ.
ಟೀಕೋಪ್ಲಾನಿನ್ ಈ ಎಲ್ಲ ಔಷಧಗಳಿಂದ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಸೋಂಕಿನಿಂದ ಗುಣಮುಖರಾಗಲು 10 ರಿಂದ 20 ಪಟ್ಟು ಅಧಿಕ ಪರಿಣಾಮಕಾರಿಗಿ ಕೆಲಸ ಮಾಡುತ್ತದೆ ಎಂದು ಸಂಶೋಧನಾ ಸಂಸ್ಥೆ ಹೇಳಿದೆ.
ನಮ್ಮ ಲ್ಯಾಬೊರೇಟರಿಯಲ್ಲಿ ಸಾರ್ಸ್ ಕೋವ್-2, ಲೋಪಿನವೀರ್ ಮತ್ತು ಹೈಡ್ರೋಕ್ಲೋರೊಕ್ವೀನ್‌ನ ಪರಿಣಾಮದ ಬಗ್ಗೆ ಸಂಶೋಧನೆ ಮಾಡಿರುವುದಾಗಿ ದೆಹಲಿ ಐಐಟಿಯ ಪ್ರೊಫೇಸರ್ ಅಶೋಕ್ ಪಟೇಲ್ ತಿಳಿಸಿದ್ದಾರೆ. ದೆಹಲಿಯ ಐಐಟಿ ಸಂಶೋಧನೆಗೆ ಏಮ್ಸ್‌ನ ಡಾ.ಪ್ರದೀಪ್ ಶರ್ಮಾ ಕೂಡ ಸಹಾಯಕರಾಗಿದ್ದಾರೆ.
ಟೀಕೋಪ್ಲಾನಿನ್ ಆ್ಯಂಟಿಬಯೋಟಿಕ್ ಆಗಿದ್ದು, ಮನುಷ್ಯನ ದೇಹದಲ್ಲಿ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿನ ನಿವಾರಣೆಗೂ ಇದನ್ನು ಈ ಮೊದಲು ಬಳಸಲಾಗುತ್ತಿತ್ತು. ರೋಮ್‌ನ ಸಪಿಯೆಂಜಾ ವಿಶ್ವವಿದ್ಯಾಲಯ ಇತ್ತೀಚೆಗೆ ರೋಮ್‌ನಲ್ಲಿ ಟೀಕೋಪ್ಲಾನಿನ ವೈದ್ಯಕೀಯ ಅಧ್ಯಯನ ಮಾಡಲಾಗಿದೆ. ಈ ಬಗ್ಗೆ ಮತ್ತಷ್ಟು ಸಂಶೋಧನೆಗಳು ಅಗತ್ಯವಿದೆ ಎಂದು ಪಟೇಲ್ ಹೇಳಿದ್ದಾರೆ. ಸದ್ಯ ಜಾಗತಿಕವಾಗಿ 3.2 ಕೋಟಿ ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, 9.80 ಲಕ್ಷ ಮಂದಿ ಮೃತಪಟ್ಟಿದ್ದಾರೆ.