ಅಪ್ಪಾ ಚಾಕೊಲೆಟ್ ಬೇಕು, ಅಪ್ಪಾ ಶಾಲೆಗೆ ಬಿಡು, ಅಪ್ಪಾ ಬುಕ್ ಬೇಕು, ಶಾಲೆ ಫೀ ಕೊಡು ನಂತರ ಅಪ್ಪಾ ಆಸ್ತಿಯಲ್ಲಿ ಪಾಲು ಕೊಡು. ಕೇವಲ ಕೊಡುವುದಕ್ಕೆ ಮಾತ್ರ ಸೀಮಿತನಾಗುವ ತಂದೆಗೆ ಧನ್ಯವಾದ ತಿಳಿಸುವ ವಿಶೇಷ ದಿನವೇ ಈ ವಿಶ್ವ ಅಪ್ಪಂದಿರ ದಿನ..
ಮಕ್ಕಳು, ಹೆಂಡತಿ, ಮನೆಗಾಗಿ ಸರ್ವಸ್ವವನ್ನು ಮುಡಿಪಾಗಿಡುವ ಅಪ್ಪ ಮಕ್ಕಳ ಪಾಲಿನ ಜೀವಂತ ದೈವ. ಪ್ರತಿ ವರ್ಷ ಜೂನ್ ತಿಂಗಳ 3ನೇ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವಾಗಿ ಜಗತ್ತಿನ 52 ರಾಷ್ಟ್ರಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದೂ ತಂದೆಯ ದಿನವನ್ನಾಗಿ ಆಚರಿಸಲಾಗುತ್ತದೆ. ತಂದೆಯ ತ್ಯಾಗಕ್ಕೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಅಮ್ಮಂದಿರ ದಿನಕ್ಕೆ ಇದು ಪೂರಕ.
ಅಮೆರಿಕನ್ ಫಾದರ್‌ಹುಡ್ : ಎ ಕಲ್ಚರಲ್ ಹಿಸ್ಟರಿಯ ಲೇಖಕ ಲಾರೆನ್ಸ್ ಆರ್. ಸ್ಯಾಮ್ಯುಯೆಲ್ ಅವರ ಪ್ರಕಾರ, ಯು ಎಸ್ ಇತಿಹಾಸದಲ್ಲಿ ಅತ್ಯಂತ ಭಾರಿ ಗಣಿಗಾರಿಕೆಯ ದುರಂತದಲ್ಲಿ ನೂರಾರು ಪುರುಷರು ಸಾವನ್ನಪ್ಪಿದ ನಂತರ 1908ರಲ್ಲಿ ಪಶ್ಚಿಮ ವರ್ಜೀನಿಯಾ ಚರ್ಚ್‌ನಲ್ಲಿ ಮೊದಲ ಬಾರಿಗೆ ತಂದೆಯ ದಿನಾಚರಣೆ ನಡೆಯಿತು. ಇದು ಅವರಿಗೆ ಕೃತಜ್ಞತೆ ಅರ್ಪಿಸಲು ಘೋಷಿಸಿದ ರಜಾ ದಿನವಾಗಿತ್ತು.
1910 ಜೂನ್ 19ರಂದು ತಂದೆಯ ದಿನಾಚರಣೆಯನ್ನು ಮೊದಲ ಬಾರಿಗೆ ಸ್ಪೋಕೇನ್‌ನ ಸೊನೋರಾ ಡೋಡ್ಸ್ ಅವರ ಶ್ರಮದಿಂದ ಆಚರಿಸಿದ್ದಾರೆಂದು ನಂಬಲಾಗಿದೆ. ಈ ಮೂಲಕ ಈಕೆ ಪಿತೃ ಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟಳು. ಸೊನೊರಾ ಸ್ಮಾರ್ಟ್ ಡೋಡ್ಸ್ ಅಮೆರಿಕದ ಸಿವಿಲ್ ವಾರ್ನಲ್ಲಿ ಪಾಲ್ಗೊಂಡಿದ್ದ ವಿಲಿಯಂ ಜಾಕ್ಸನ್ ಅವರ ಮಗಳು.
ಹೆಜ್ಜೆ ಹೆಜ್ಜೆಗೂ ಜೊತೆಗಿದ್ದು, ಕಿರು ಬೆರಳ ಹಿಡಿದು ಮುನ್ನಡೆಸಿ, ಜೀವನದ ಪಾಠ ಕಲಿಸಿ, ಬದುಕು ರೂಪಿಸಿ ಮುನ್ನಡೆಸಿದ ಕೆಲವರ ಅಚ್ಚುಮೆಚ್ಚಿನ, ಇನ್ನೂ ಕೆಲವರ ಪಾಲಿನ ಸಿಡುಕ ಅಪ್ಪನಿಗೆ ಕೃತಜ್ಞತೆ ಅರ್ಪಿಸುವ ದಿನವೇ ವಿಶ್ವ ಅಪ್ಪಂದಿರ ದಿನ.. ಜಗತ್ತಿನ ಎಲ್ಲ ಮಕ್ಕಳ ಬದುಕಿನ ಹೀರೋಗಳಿಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.