ಶಹಜಹಾನ್ಪುರ (ಉತ್ತರ ಪ್ರದೇಶ): ಸಣ್ಣ ಅಪಘಾತದಿಂದ ಉಂಟಾದ ವಾಗ್ವಾದಕ್ಕೆ ವಕೀಲನೊಬ್ಬ ತಂದೆ ಮಗನನ್ನು ಗುಂಡಿಕ್ಕಿ ಕೊಂದ ಘಟನೆ ಸದರ್ ಬಜಾರ್ ವ್ಯಾಪ್ತಿಯ ಚಿನ್ನೋರ್ ಗ್ರಾಮದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಆಕಾಶ್ (18) ಎಂಬ ಯುವಕ ಭಾನುವಾರ ತನ್ನ ಗ್ರಾಮದ ಬಳಿ ಬೈಕ್ ಓಡಿಸುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು, ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕ ಮತ್ತು ಆಕಾಶ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಕಾಶ್ ತಂದೆ ಕೈಲಾಶ್ ವರ್ಮಾ (40) ಕೂಡ ಸ್ಥಳಕ್ಕೆ ತೆರಳಿದ್ದಾರೆ. ಜಗಳ ತಾರಕಕ್ಕೇರಿ ತಂದೆ ಮತ್ತು ಮಗನ್ನು ವಕೀಲ ಗುಂಡಿಕ್ಕಿ ಕೊಂದಿದ್ದಾನೆ.
ಈ ಬಗ್ಗೆ ಮಾತನಾಡಿರುವ ತುರ್ತು ವೈದ್ಯಕೀಯ ಅಧಿಕಾರಿ ಡಾ.ಅನುರಾಗ್, ತಂದೆ ಮತ್ತು ಮಗ ಗುಂಡೇಟಿನಿಂದ ಸಾವಿಗೀಡಾಗಿದ್ದಾರೆ. ಮೃತರ ಹೊಟ್ಟೆಯಿಂದ ಗುಂಡುಗಳನ್ನು ಹೊರತೆಗೆಯಲಾಗಿದೆ. ಅವರು ಆಸ್ಪತ್ರೆ ತಲುಪಿದಾಗ ಜೀವಂತವಾಗಿದ್ದರು, ಆದರೆ ಚಿಕಿತ್ಸೆಯ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿ ಅದೇ ಗ್ರಾಮ ವಕೀಲನಾಗಿದ್ದು, ತಲೆಮರೆಸಿಕೊಂಡಿದ್ದ ವಕೀಲನನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಹಜಹಾನ್ಪುರ ಎಸ್ಪಿ ದಿನೇಶ್ ತ್ರಿಪಾಠಿ ಹೇಳಿದ್ದಾರೆ.