ಚೆನ್ನೈ: ದ್ರಾಕ್ಷಿ ಹುಳಿ ಬರಿಸಿ ಹಾಗೂ ಕೆಲ ಮಾದಕ ರಾಸಾಯನಿಕಗಳನ್ನು ಬಳಸಿ ಮನೆಯಲ್ಲೇ ಮದ್ಯ ತಯಾರಿಸಲೆತ್ನಿಸಿದ ತಂದೆ, ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಆಧಾರದಲ್ಲಿ, ಉತ್ತರ ಚೆನ್ನೈ ಭಾಗದ ಕೊಡುಂಗಯ್ಯೂರ್ ಬಳಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು.
56 ವರ್ಷದ ವ್ಯಕ್ತಿ, 26 ವರ್ಷದ ಆತನ ಮಗ ಹಾಗೂ ಮತ್ತೊಬ್ಬ ಯುವಕ ಸೇರಿಕೊಂಡು ಮನೆಯಲ್ಲಿಯೇ ಮದ್ಯ ತಯಾರಿಸುತ್ತಿರುವುದು ದಾಳಿ ವೇಳೆ ಪತ್ತೆಯಾಗಿತ್ತು. ದ್ರಾಕ್ಷಿಯಿಂದ ತಯಾರಿಸಿದ 30 ಲೀಟರ್ ವೈನ್, "ಸುಂದಾ ಕಾಂಜಿ" ಎಂದು ಕರೆಯಲಾಗುವ 5 ಲೀಟರ್ ಅಮಲು ಬರಿಸುವ ಪಾನೀಯಗಳನ್ನು ಪೊಲೀಸರು ಸ್ಥಳದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಮದ್ಯ ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾ.24 ರಿಂದಲೇ ಚೆನ್ನೈ ಸೇರಿದಂತೆ ಸಂಪೂರ್ಣ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.