ಫಿಲಿಬಿಟ್ (ಉತ್ತರ ಪ್ರದೇಶ): ಇಡೀ ದೇಶವೇ ಕೊರೊನಾ ವೈರಾಣು ತಂದಿಟ್ಟ ಸಂಕಷ್ಟದಲ್ಲಿದೆ. 130 ಕೋಟಿ ಜನರು ಮಾರಣಾಂತಿಕ ರೋಗದ ಬಿಗಿ ಮುಷ್ಠಿಯಿಂದ ಹೊರ ಬರುವುದು ಹೇಗೆ? ಎಂಬ ತಲೆನೋವಲ್ಲಿದ್ದಾರೆ. ಇತ್ತ ವಿಲಕ್ಷಣ ಮತ್ತು ವಿಚಿತ್ರ ಅಪರಾಧ ಕೃತ್ಯಗಳಿಗೆ ಹೆಸರಾಗಿರುವ ಉತ್ತರಪ್ರದೇಶದಲ್ಲಿ ವ್ಯಕ್ತಿಯೋರ್ವ ಸಣ್ಣ ವಿಚಾರಕ್ಕಾಗಿ ಕೋಪತಾಪ ಪ್ರದರ್ಶಿಸಿದ್ದಾನೆ. ಅಷ್ಟೇ ಆಗಿದ್ದಿದ್ದರೆ ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪಕ್ಕೆ ಹೋಗುತ್ತಿರಲಿಲ್ಲ. ಕೋಪೋದ್ರಿಕ್ತನಾಗಿ ಪಿಸ್ತೂಲ್ ತೆಗೆದು ಮಗನ ಮೇಲೆಯೇ ಗುಂಡು ಹಾರಿಸಿದ್ದಾನೆ.! ಪರಿಣಾಮ,16 ವರ್ಷದ ಮಗ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಉತ್ತರಪ್ರದೇಶದ ಫಿಲಿಬಿಟ್ನ ಸೋಹಾನ್ ಗ್ರಾಮದ ನಿವಾಸಿ 55 ವರ್ಷದ ಗುರ್ಮುಖ್ ಸಿಂಗ್ ಅನಾಹುತ ಇಷ್ಟಕ್ಕೆ ನಿಲ್ಲಲಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ತನ್ನ ಸಹೋದರನ ಮೇಲೂ ಫೈರ್ ಮಾಡಿದ್ದಾನೆ. ತದನಂತರ ತನಗೂ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾನೆ.
ತಂದೆಗೆ ಅರ್ಧ ಲೋಟ ಹಾಲು ಕೊಟ್ಟ ಮಗ:
ಕುಡಿಯುವುದಕ್ಕೆ ಹಾಲು ತೆಗೆದುಕೊಂಡು ಬಾ ಎಂದು ಗುರ್ಮುಖ್ ಸಿಂಗ್ ಮಗನಿಗೆ ತಿಳಿಸಿದ್ದಾನೆ. ಈ ವೇಳೆ ಅರ್ಧ ಗ್ಲಾಸ್ ಹಾಲು ತೆಗೆದುಕೊಂಡು ಬಂದಿರುವ ಮಗ ನಂತರ ತಾನು ತುಂಬಿದ ಲೋಟವನ್ನೆತ್ತಿಕೊಂಡು ಹಾಲು ಕುಡಿಯುತ್ತಿದ್ದ. ಇದನ್ನು ಗಮನಿಸಿ ಕೆಂಡಾಮಂಡಲನಾದ ತಂದೆ ಕೋಪದ ಕೈಯಲ್ಲಿ ಬುದ್ದಿ ಕೊಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.
ಘಟನೆಯಿಂದ ಮಗ, ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಸಹೋದರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಚೇತರಿಸಿಕೊಳ್ತಿದ್ದಾನೆ ಎಂಬ ಮಾಹಿತಿ ದೊರೆತಿದೆ.