ಕೋಲ್ಕತ್ತಾ: ಮಾಸ್ಕ್ ಧರಿಸುವುದಕ್ಕೆ ನಿರಾಕರಿಸಿದ ಮಧ್ಯ ವಯಸ್ಸಿನ ವಿಶೇಷಚೇತನ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾದಲ್ಲಿ ನಡೆದಿದೆ.
ಇಲ್ಲಿನ ಶೋವಾಬಜಾರ್ ನಿವಾಸಿ ಬನ್ಶಿಧರ್ ಮಲ್ಲಿಕ್ (78) ಎಂಬವರು ಶನಿವಾರ ರಾತ್ರಿ ಶ್ಯಾಂಪುಕೂರ್ ಪೊಲೀಸ್ ಠಾಣೆಗೆ ತೆರಳಿದ್ದು, ತಮ್ಮ ಮಗನನ್ನು ಬಟ್ಟೆಯ ಪಟ್ಟಿಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಶೀರ್ಸೆಂದು ಮಲ್ಲಿಕ್ (45) ಮೃತ ವ್ಯಕ್ತಿ.
ಪ್ರತಿದಿನ ಸಂಜೆ ನನ್ನ ಮಗ ಮನೆಯಿಂದ ಮಾಸ್ಕ್ ಇಲ್ಲದೇ ಹೊರ ಹೋಗುತ್ತಿದ್ದ. ಇಂದೂ ಕೂಡ ನನ್ನ ಮಾತನ್ನು ನಿರಾಕರಿಸಿ ಹೊರಟಿದ್ದು, ಮಾತಿಗೆ ಮಾತು ಬೆಳೆದು ಅವನನ್ನು ಕೊಂದಿರುವೆ ಎಂದು ಆರೋಪಿ ಬನ್ಶಿಧರ್ ಮಲ್ಲಿಕ್ ತಪ್ಪ ಒಪ್ಪಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆರೋಪಿ ತಂದೆಯನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿರುವುದಾಗಿ ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಮುರಳಿಧರ್ ಶರ್ಮಾ ಮಾಹಿತಿ ನೀಡಿದ್ದಾರೆ.