ಬುಲ್ಡಾನಾ (ಮಹಾರಾಷ್ಟ್ರ) : ಈಶ್ವರ-ಅಲ್ಲಾಹು ಎಲ್ಲ ಒಂದೇ ಕಣ್ರೀ.. ಬರೀ ಹೆಸರಷ್ಟೇ ಬೇರೆ ಬೇರೆ. ಅದಕ್ಕೆ ಅಮೆರಿಕಾದ 28ನೇ ಅಧ್ಯಕ್ಷ ವುಡ್‌ರೌ ವಿಲ್ಸನ್ 'ಧರ್ಮವು ಮಾನವ ಸೇವೆಗಿಂತಲೂ ದೊಡ್ಡದಲ್ಲ' ಅಂದಿದ್ದರು. ಅದೇ ಮಾತನ್ನ ಇಲ್ಲೊಬ್ಬ ಅರಣ್ಯ ಸಂರಕ್ಷಣಾಧಿಕಾರಿ ನಿಜವಾಗಿಸ್ತಿದ್ದಾರೆ. ತನ್ನ ವಾಹನ ಓಡಿಸುವ ಮುಸ್ಲಿಂ ಡ್ರೈವರ್ ಬದಲು ತಾವೇ ರಂಜಾನ್ ತಿಂಗಳಲ್ಲಿ ಉಪವಾಸ ಮಾಡ್ತಿದ್ದಾರೆ.
ಚಿಂತಿಸ್ಬೇಡ ಕಣೋ, ನಿನ್ ಬದಲು ನಾನು ರೋಜಾ ಇರ್ತೇನೆ!
ಇವರು ಮಹಾರಾಷ್ಟ್ರ ಬುಲ್ಡಾನದ ಸಂಜಯ್ ಎನ್ ಮಾಲಿ ಎಂಬ ಐಎಫ್‌ಎಸ್ ಅಧಿಕಾರಿ. ಅಮರಾವತಿ ವಿಭಾಗೀಯ ಅರಣ್ಯಾಧಿಕಾರಿ ಸಂಜಯ್ ದೇಶದ ವೈವಿಧ್ಯತೆಯಲ್ಲಿನ ಏಕತೆಯ ತತ್ವ ಸಾರುತ್ತಿದ್ದಾರೆ. ಇವರಿಗೆ ವಾಹನ ಓಡಿಸುವ ಜಾಫರ್ ಎಂಬ ಚಾಲಕನಿದ್ದಾನೆ. ಮೇ 6 ರಂದು ಮಾತಾಡ್ತಾ ಮತಾಡ್ತಾ ಜಾಫರ್ ರಂಜಾನ್ ತಿಂಗಳಲ್ಲಿ ಉಪವಾಸವಿಲ್ವೇ ಅಂತಾ ವಿಚಾರಿದ್ದರು ಸಂಜಯ್ ಮಾಲಿ. ಅನಾರೋಗ್ಯ ಮತ್ತು ಡ್ಯುಟಿ ಕಾರಣ ಆಗ್ತಿಲ್ಲ ಸರ್, ನನ್ನ ಬದಲು ನಮ್ಮ ತಂದೆ-ತಾಯಿ ಹಾಗೂ ಮನೆಯವರು ರೋಜಾ ಕೈಗೊಳ್ತಾರೆ ಅಂತಾ ಹೇಳಿದ್ದ. ಆದರೆ, ಇದನ್ನ ಕೇಳಿದ ಅಧಿಕಾರಿಗೆ ಏನ್ ತಿಳಿಯಿತೋ ಏನೋ, ನೀನೇನೂ ಚಿಂತಿಸಬೇಡ, ನಿನ್ನ ಪರ ನಾನು ನಾಳೆಯಿಂದಲೇ ರೋಜಾ ಇರ್ತೇನೆ ಅಂತಾ ಹೇಳಿದ್ದರು. ಹಾಗೇ ಮರುದಿನದಿಂದಲೇ ರೋಜಾ ಮಾಡ್ತಿದ್ದಾರೆ ಫಾರೆಸ್ಟ್ ಅಧಿಕಾರಿ.
ತೂಕ ಇಳೀತು, ಬ್ರಾತೃತ್ವ ಬೆಳೀತು, ಹೊಸ ಅನುಭೂತಿ ಸಿಕ್ಕಿತು!
ಬೆಳಗ್ಗೆ 4 ಗಂಟೆಗೆ ಏಳುವ ಫಾರೆಸ್ಟ್ ಅಧಿಕಾರಿ, ನಿತ್ಯ ಕರ್ಮದ ಬಳಿಕ ದೇವರನ್ನ ಪೂಜಿಸ್ತಾರೆ, ಪ್ರಾರ್ಥಿಸ್ತಾರೆ. ಅದಾದ ನಂತರ ಆಟವಾಡಲು ತೆರಳ್ತಾರೆ. ತಮ್ಮ ಪಾಲಿನ ದಿನದ ಎಲ್ಲ ಕೆಲಸ ಮಾಡ್ತಾರೆ. ಸಂಜೆ 6 ಗಂಟೆಗೆ ತನ್ನ ಸಿಬ್ಬಂದಿ ಜತೆಗೆ ಇಫ್ತಿಯಾರ ಕೂಟ ಆಯೋಜಿಸುತ್ತಾರಂತೆ. 'ಯಾವುದೇ ಧರ್ಮವಾದರೂ ಒಳ್ಳೇಯದನ್ನೇ ಹೇಳುತ್ತೆ. ಕೆಟ್ಟದ್ದನ್ನ ಬೋಧಿಸಲ್ಲ. ವೈವಿದ್ಯತೆಯಲ್ಲಿ ಏಕತೆ ಗಟ್ಟಿಗೊಳಿಸಲು ಪರಸ್ಪರ ಧರ್ಮ ಸಹಿಷ್ಣುತೆ, ಸೌಹಾರ್ಧ ಸಂಬಂಧ ಇರಿಸಿಕೊಳ್ಬೇಕು. ಪರಸ್ಪರರ ಧರ್ಮದಲ್ಲಿನ ಒಳ್ಳೇ ಸಂಗತಿ ಅಳವಡಿಸಿಕೊಳ್ಬೇಕು. ಮನುಷ್ಯರನ್ನ ಮನುಷ್ಯರಂತೆ ನೋಡ್ಬೇಕು. ಮೇ 7 ರಿಂದ ಈವರೆಗೂ ಉಪವಾಸ ಮಾಡ್ತಿರೋದ್ರಿಂದ ದೈಹಿಕ ಮತ್ತು ಮಾನಸಿಕವಾಗಿ ಹೊಸ ಅನುಭವ ಅನುಭವಾಗಿದೆ' ಅಂತಾರೆ ಅಧಿಕಾರಿ ಸಂಜಯ್.
ದೆಹಲಿಯ ತಿಹಾರ್ ಜೈಲಿನಲ್ಲೂ ಖೈದಿಗಳಿಂದ ಉಪವಾಸ ವ್ರತ!
ದೆಹಲಿಯ ತಿಹಾರ್ ಜೈಲು ದಕ್ಷಿಣ ಏಷ್ಯಾದಲ್ಲೇ ಅತೀ ದೊಡ್ಡದು. ಇಲ್ಲೂ150ಕ್ಕೂ ಹೆಚ್ಚು ಹಿಂದೂ ಖೈದಿಗಳು ರಮ್ಜಾನ್ ಉಪವಾಸ ಮಾಡ್ತಿದ್ದಾರೆ. ಜೈಲಿನ ಅಧಿಕಾರಿಗಳು ಇದಕ್ಕಾಗಿ ವಿಶೇಷ ವ್ಯವಸ್ಥೆ ಕೂಡ ಮಾಡಿದ್ದಾರಂತೆ. ಮುಸ್ಲಿಂ ಸ್ನೇಹಿತರ ಜತೆಗೆ ಸೋದರತ್ವ ಬಾಂಧವ್ಯ ವೃದ್ಧಿಸಿಕೊಳ್ಳಲು ಹಿಂದೂ ಖೈದಿಗಳು ಈ ರೀತಿ ರೋಜಾ ಮಾಡ್ತಿದ್ದಾರೆ. ಧರ್ಮಗಳು ಒಂದುಗೂಡಿಸಬೇಕೇ ಹೊರತು, ಒಡೆಯಬಾರದು. ಒಂದಾಗಿ ಬಾಳುವುದರಲ್ಲಿಯೇ ಜೀವನ ಸಾರ್ಥಕತೆ ಇದೇ ಅಲ್ವೇ..