ಬಿಂಡ್ ( ಮಧ್ಯಪ್ರದೇಶ) : ಜಿಲ್ಲೆಯ ಗೌರಿ ಸರೋವರದಲ್ಲಿ ಕಾರು ಸಮೇತ ಮುಳುಗುತ್ತಿದ್ದ ಯುವಕನ್ನು ರಕ್ಷಿಸಿದ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೀಪಾವಳಿಯ ಮರುದಿನ ಗೌರಿ ಸರೋವರದ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸರೋವರದ ತಡೆಗೋಡೆ ಮುರಿದು ನೀರಿಗೆ ಬಿದ್ದಿದೆ. ಈ ವೇಳೆ ಇದೇ ದಾರಿಯಾಗಿ ಬರುತ್ತಿದ್ದ ಸ್ಥಳೀಯ ವಕೀಲ ಮಹೇಶ್ ಮಿಶ್ರಾ ಸರೋವರದ ಬಳಿ ಧಾವಿಸಿ ಬಂದಿದ್ದರು.
ಮಹೇಶ್ ಮಿಶ್ರಾ ನೋಡ ನೋಡುತ್ತಿದ್ದಂತೆ, ಕಾರು ಸಮೇತ ಚಾಲಕ ನೀರಿನಲ್ಲಿ ಮುಳುಗುತ್ತಿದ್ದ. ಇದನ್ನು ಗಮನಿಸಿದ ಅವರು, ತನ್ನ ಬಳಿಯಿದ್ದ ಟ್ಯೂಬ್ಗಳನ್ನು ಆತನ ಬಳಿಗೆ ಎಸೆದು, ನೀರಲ್ಲಿ ಮುಳುಗದಂತೆ ತಡೆದಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಹಗ್ಗ ಬಳಸಿ ನೀರಿಗಿಳಿದು ಕಾರು ಚಾಲಕನ ಪ್ರಾಣ ಉಳಿಸಿದ್ದಾರೆ.
ಚಾಲಕ ನೀರಿನಿಂದ ಮೇಲೆ ಬರುತ್ತಿದ್ದಂತೆ, ಕಾರು ನೀರಿನಲ್ಲಿ ಮುಳುಗಿದೆ. ತನ್ನ ವಯಸ್ಸನ್ನೂ ಲೆಕ್ಕಿಸದೆ ನೀರಿಗೆ ಧುಮುಕಿ ಯುವಕನ ಪ್ರಾಣ ಕಾಪಾಡಿ ವಕೀಲ ಮಹೇಶ್ ಮಿಶ್ರಾ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಹೇಶ್ ಮಿಶ್ರಾ ಈ ಮೊದಲು ಇದೇ ರೀತಿ ಹಲವಾರು ಜೀವಗಳನ್ನು ಉಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದೆ.