ಶ್ರೀನಗರ (ಜಮ್ಮು ಕಾಶ್ಮೀರ): ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಫಾರೂಕ್ ಅಬ್ದುಲ್ಲಾ ರೋಶಿನಿ ಕಾಯ್ದೆಯ ಫಲಾನುಭವಿಯಲ್ಲ ಹಾಗೂ 25 ಸಾವಿರ ಕೋಟಿಯ ರೋಶಿನಿ ಹಗರಣದಲ್ಲಿ ಫಾರೂಕ್ ಅಬ್ದುಲ್ಲಾ ಹೆಸರು ಕೇಳಿಬರುತ್ತಿರುವುದು ಆಧಾರ ರಹಿತ ಎಂದು ನ್ಯಾಷನಲ್ ಕಾನ್ಫರೆನ್ಸ್ ಮಂಗಳವಾರ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಕ್ತಾರ ಇಮ್ರಾನ್ ನಬಿ ದರ್ 'ಡಾ.ಫಾರೂಕ್ ಅಬ್ದುಲ್ಲಾ ಅವರು ರೋಶ್ನಿ ಕಾಯ್ದೆಯ ಫಲಾನುಭವಿ ಎಂಬ ಸುದ್ದಿ ಸುಳ್ಳಾಗಿದ್ದು, ದುರುದ್ದೇಶ ಪೂರಿತವಾಗಿ ಈ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಅಬ್ದುಲ್ಲಾ ಅವರು ಶ್ರೀನಗರ ಅಥವಾ ಜಮ್ಮುವಿನಲ್ಲಿರುವ ತಮ್ಮ ನಿವಾಸಕ್ಕಾಗಿ ರೋಶಿನಿ ಯೋಜನೆಯನ್ನು ಬಳಸಿಕೊಂಡಿಲ್ಲ ಎಂದಿರುವ ಅವರು ಈ ಬಗ್ಗೆ ಆರೋಪ ಮಾಡುವವರು ಸುಳ್ಳು ಹೇಳುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಏನಿದು ರೋಶಿನಿ ಕಾಯ್ದೆ ಹಾಗೂ ರೋಶಿನಿ ಹಗರಣ..?
ಜಮ್ಮು ಮತ್ತು ಕಾಶ್ಮೀರ ಭೂಮಿ (ಭೂಮಿ ಆಕ್ರಮಿಸಿಕೊಂಡವರಿಗೆ ಮಾಲೀಕತ್ವವನ್ನು ಹಸ್ತಾಂತರಿಸುವುದು) ಕಾಯ್ದೆಯನ್ನು 2001ರಲ್ಲಿ ಜಾರಿಗೊಳಿಸಲಾಗಿದ್ದು, ಇದೇ ಕಾಯ್ದೆಯನ್ನು ರೋಶಿನಿ ಕಾಯ್ದೆ ಎಂದು ಕರೆಯಲಾಗುತ್ತದೆ.
ಈ ಕಾಯ್ದೆಯಡಿಯಲ್ಲಿ ಸುಮಾರು 24 ಲಕ್ಷ ಎಕರೆಯಷ್ಟು ಭೂಮಿಯನ್ನು ಆಕ್ರಮಿಸಿಕೊಂಡವರ ಮಾಲೀಕತ್ವಕ್ಕಾಗಿ ಬಿಟ್ಟುಕೊಡಬೇಕಾಯಿತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಬೆಟ್ಟ, ಗುಡ್ಡ, ನದಿಗಳ ಅಕ್ಕಪಕ್ಕದ ಜಮೀನು ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಕೈವಶವಾಗಿದೆ ಎಂದು ಆರೋಪಿಸಲಾಗಿದ್ದು, ರೋಶಿನಿ ಕಾಯ್ದೆಯನ್ನು ಅನೂರ್ಜಿತಗೊಳಿಸಲಾಯಿತು.
ಕೆಲ ದಿನಗಳ ಹಿಂದೆ ಸರ್ಕಾರ ತನ್ನ ವೆಬ್ಸೈಟ್ನಲ್ಲಿ ರೋಶಿನಿ ಕಾಯ್ದೆಯ ಫಲಾಭವಿಗಳನ್ನು ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಐಎಎಸ್ ಹಾಗೂ ರಾಜಕೀಯ ವ್ಯಕ್ತಿಗಳು ಅವರ ಸಂಬಂಧಿಗಳು ಮುಂತಾದವರ ಹೆಸರನ್ನು ಸೇರಿಸಲಾಗಿತ್ತು. ಈ ಪಟ್ಟಿಯಲ್ಲಿ ಫಾರೂಕ್ ಅಬ್ದುಲ್ಲಾ ಹೆಸರೂ ಕೂಡಾ ಇದ್ದು, ಇದನ್ನೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ತಿರಸ್ಕರಿಸಿದೆ.