ಪುಣೆ (ಮಹಾರಾಷ್ಟ್ರ): ಪ್ರತಿಭಟನಾ ನಿರತ ರೈತರಿಗೆ ನ್ಯಾಯ ಸಿಗಲಿದೆ ಎಂದು ರೈತ ಸಂಘಟನೆಯೊಂದರ ಮುಖಂಡ ಅನಿಲ್ ಘನ್ವತ್ ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್ ರಚಿಸಿರುವ ನಾಲ್ಕು ಸದಸ್ಯರ ಸಮಿತಿಯಲ್ಲಿ ಸೇರ್ಪಡೆಗೊಂಡಿರುವ ಮಹಾರಾಷ್ಟ್ರ ಮೂಲದ ಶೇತ್ಕರಿ ಸಂಘಟನೆಯ ಅಧ್ಯಕ್ಷ ಅನಿಲ್ ಘನ್ವತ್, ರೈತರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.
ಜನವರಿ 12ರಂದು ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿದ್ದು, ಸರ್ಕಾರ ಹಾಗೂ ರೈತರೊಂದಿಗೆ ಮಾತುಕತೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ತಜ್ಞರ ಸಮಿತಿಗೆ ತಿಳಿಸಿದೆ.
"ಈ ಆಂದೋಲನವು ನಿಲ್ಲಬೇಕು ಮತ್ತು ರೈತರ ಹಿತದೃಷ್ಟಿಯಿಂದ ಕಾನೂನು ರೂಪಿಸಬೇಕು. ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕೆಲವು ತಪ್ಪು ಕಲ್ಪನೆಗಳು ಇದ್ದು, ಅವರ ಮಾತನ್ನು ಕೇಳಬೇಕು. ರೈತರಿಗೆ ಸ್ಪಷ್ಟೀಕರಣ ನೀಡಬೇಕು" ಎಂದು ಅನಿಲ್ ಘನ್ವತ್ ಹೇಳಿದ್ದಾರೆ.