ನವದೆಹಲಿ : ದೆಹಲಿಯ ಬುರಾರಿ ಮೈದಾನದಲ್ಲಿ ರೈತರ ಪ್ರತಿಭಟನೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸ್ ಭದ್ರತೆಯ ಈ ಹಿನ್ನೆಲೆ ಈ ಜಾಗವನ್ನು ‘ತೆರೆದ ಜೈಲು’ ಎಂದು ಭಾರತೀಯ ಕಿಸಾನ್ ಯೂನಿಯನ್ ಕ್ರಾಂತಕಾರಿ (ಬಿಕೆಯು)ಯ ಪಂಜಾಬ್ ಘಟಕದ ಮುಖ್ಯಸ್ಥ ಸುರ್ಜೀತ್ ಸಿಂಗ್ ಕರೆದಿದ್ದಾರೆ.
ಬುರಾರಿ ಮೈದಾನದಲ್ಲಿ ಉಳಿದುಕೊಂಡಿರುವ ರೈತರಿಗೆ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರತಿಭಟಿಸಲು ದೇಶದ ವಿವಿಧ ಭಾಗಗಳಿಂದ ಬರುವ ರೈತರಿಗಾಗಿ ಬುರಾರಿ ಮೈದಾನವನ್ನು ಗೊತ್ತುಪಡಿಸಲಾಗಿದೆ. ಅವರ ಭದ್ರತೆಗಾಗಿ ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ.
ನೀರು, ನೈರ್ಮಲ್ಯ, ವಿದ್ಯುತ್ ಮತ್ತು ಆಹಾರದಂತಹ ಸೌಲಭ್ಯಗಳನ್ನು ಒದಗಿಸಲು ನಾವು ನಾಗರಿಕ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ ಎಂದು ದೆಹಲಿ ವಾಯವ್ಯ ಡಿಸಿಪಿ ವಿಜಯಂತ ಆರ್ಯ ತಿಳಿಸಿದರು.
ದೆಹಲಿ ಪೊಲೀಸರು ರಾಜ್ಯ ಗಡಿಯಲ್ಲಿರುವ ಎಲ್ಲ ರೈತರು ಇಲ್ಲಿಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಸುಮಾರು 500 ರಿಂದ 600 ರೈತರು ಇಲ್ಲಿದ್ದಾರೆ ಮತ್ತು ಹೆಚ್ಚಿನವರು ಬರುತ್ತಿದ್ದಾರೆ. ಇಲ್ಲಿ ಉಳಿದುಕೊಂಡಿರುವ ಪ್ರತಿಯೊಬ್ಬ ರೈತನಿಗೆ ಸುರಕ್ಷತೆ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಭದ್ರತಾ ನಿಯೋಜನೆಯ ಮಧ್ಯೆ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಗಾಜಿಪುರ-ಗಾಜಿಯಾಬಾದ್ (ದೆಹಲಿ-ಯುಪಿ) ಗಡಿಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಭಾನುವಾರ ಸಂಜೆ ರಾಷ್ಟ್ರ ರಾಜಧಾನಿಯ ಗಾಜಿಪುರದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯಲು ರೈತರು ಪ್ರಯತ್ನಿಸಿದಾಗ, ಪೊಲೀಸರು ಲಾಠಿ ಚಾರ್ಜ್‌ಗೆ ಮುಂದಾದರು.
ರೈತರ ಪ್ರತಿಭಟನೆಯ ಮಧ್ಯೆ ದೆಹಲಿ-ಬಹದ್ದೂರ್‌ಗಢ್ ರಸ್ತೆಯ ಟಿಕ್ರಿ ಗಡಿ ಸಂಚಾರವನ್ನು ಸ್ಥಗಿತಗೊಳಸಲಾಗಿದೆ. ಬಿಕೆಯು ಬ್ಯಾನರ್ ಅಡಿಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ನವದೆಹಲಿಯ ಬುರಾರಿ ಮೈದಾನಕ್ಕೆ ತೆರಳಲು ನಿರಾಕರಿಸಿದರು. ಬುರಾರಿ ಮೈದಾನದಲ್ಲಿ ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗೆ ಆಹ್ವಾನಿಸಿದೆ.
ಆದರೆ, ಮಾತುಕತೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಷರತ್ತು ವಿಧಿಸಿರುವುದು ರೈತರಿಗೆ ಮಾಡಿದ ಅವಮಾನ. ನಾವು ಎಂದಿಗೂ ಬುರಾರಿಗೆ ಹೋಗುವುದಿಲ್ಲ. ಇದು ಉದ್ಯಾನವನವಲ್ಲ, ತೆರೆದ ಜೈಲು.
ದೆಹಲಿ ಪೊಲೀಸರು ಉತ್ತರಾಖಂಡ ರೈತ ಸಂಘದ ಅಧ್ಯಕ್ಷರಿಗೆ ಜಂತರ್ ಮಂತರ್ಗೆ ಕರೆದೊಯ್ಯುವುದಾಗಿ ಹೇಳಿದರು. ಆದರೆ, ಬದಲಿಗೆ ಅವರನ್ನು ಬುರಾರಿಯಲ್ಲಿ ಲಾಕ್ ಮಾಡಿದ್ದಾರೆ ಎಂದು ಬಿಕೆಯು ಪಂಜಾಬ್ ಘಟಕದ ಮುಖ್ಯಸ್ಥ ಸುರ್ಜೀತ್ ಸಿಂಗ್ ಕಿಡಿ ಕಾರಿದರು.